ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವು ನಿಷ್ಪಕ್ಷಪಾತವಾಗಿ ಬಗೆಹರಿಯುವ ನಿಟ್ಟಿನಲ್ಲಿ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಆ ಪದವಿಯಿಂದ ಕಿತ್ತು ಹಾಕಬೇಕು ಎಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಆಗ್ರಹಿಸಿದ್ದಾರೆ.
"ಮೊಯಿಲಿ ಒಬ್ಬ ಕನ್ನಡಿಗ... ಕೇಂದ್ರ ಸರಕಾರವು ನ್ಯಾಯಾಲಯಗಳ ಮೇಲೂ ಒತ್ತಡ ಹೇರುತ್ತಿದೆ... ಗಡಿ ಭಾಗದಲ್ಲಿರುವ ಮರಾಠಿ ಜನತೆ ಈ ನ್ಯಾಯಾಲಯಗಳಿಂದ ನ್ಯಾಯವನ್ನು ನಿರೀಕ್ಷಿಸುವುದಾದರೂ ಹೇಗೆ" ಎಂದು ಪತ್ರಿಕಾ ಹೇಳಿಕೆಯೊಂದರಲ್ಲಿ ಠಾಕ್ರೆ ಪ್ರಶ್ನಿಸಿದ್ದಾರೆ.
ಉಭಯ ರಾಜ್ಯಗಳ ಗಡಿ ವಿವಾದ ಪರಿಹಾರವಾಗಬೇಕಿದ್ದರೆ, ಸ್ವಚ್ಛ ಚಾರಿತ್ರ್ಯ, ತಟಸ್ಥವಾಗಿರುವ ವ್ಯಕ್ತಿಯನ್ನು ಕಾನೂನು ಮಂತ್ರಿಯನ್ನಾಗಿ ನೇಮಿಸಬೇಕು ಎಂದು ಠಾಕ್ರೆ ಹೇಳಿದ್ದಾರೆ.
ಹೆಚ್ಚಿನ ಜನರು ಮರಾಠಿ ಭಾಷೆ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಬೆಳಗಾವಿಯ ವಿವಾದಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಗದು ಎಂಬ ಕುರಿತ ಅಫಿದವಿತ್ ಅನ್ನು ಕೇಂದ್ರ ಸರಕಾರವು ಕಳೆದ ಜೂನ್ ತಿಂಗಳಲ್ಲಿ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹಿನ್ನಡೆಯಾಗಿತ್ತು.