ಸೋಮಾಲಿಯಾದಲ್ಲಿ ಭಾರತೀಯರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆಯೇ? ಕೆಲ ದಿನಗಳ ಹಿಂದಷ್ಟೇ ಆ ದೇಶದ ರಾಜಧಾನಿ ಮೊಗಾದಿಶು ಎಂಬಲ್ಲಿ ಅಚಾನಕ್ ಆಗಿ ಬಾಂಬ್ ಸ್ಫೋಟಗೊಂಡ ಘಟನೆಯಲ್ಲಿ ಇಬ್ಬರು ಭಾರತೀಯರಿದ್ದರು ಎಂಬುದು ಬಹಿರಂಗವಾದ ನಂತರ ಇಂತಹ ಸಂಶಯಗಳು ಹುಟ್ಟಿಕೊಂಡಿವೆ.
ಮೊಗಾದಿಶುವಿನಲ್ಲಿ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟಕ್ಕೆ ಅಣಿಯಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಂಬ್ ಸ್ಫೋಟಗೊಂಡ ಕಾರಣ ಅಲ್‌ಖೈದಾ ಜತೆ ಸಂಬಂಧ ಹೊಂದಿರುವ 'ಅಲ್ ಶಬಾಬ್' ಎಂಬ ಸಂಘಟನೆಯ ಕಾರ್ಯಕರ್ತರು ಸಾವನ್ನಪ್ಪಿದ್ದರು.
ಇದರಲ್ಲಿ ಇಬ್ಬರು ಭಾರತೀಯರು, ಮೂವರು ಪಾಕಿಸ್ತಾನಿಗಳು, ಓರ್ವ ಅಫ್ಘಾನಿಸ್ತಾನದವ ಸೇರಿದಂತೆ ಒಟ್ಟು 10 ಮಂದಿ ಅಲ್ ಶಬಾಬ್ ಭಯೋತ್ಪಾದಕರು ಸತ್ತಿದ್ದಾರೆ ಎಂದು ಕಳೆದ ವಾರಾಂತ್ಯದಲ್ಲಿ ಸೋಮಾಲಿಯಾದ ಮಾಹಿತಿ ಸಚಿವಾಲಯವು ತಿಳಿಸಿತ್ತು.
ಒಂದು ವೇಳೆ ಭಾರತೀಯರು ಈ ಸಂಘಟನೆಯಲ್ಲಿ ಪಾತ್ರವಹಿಸುತ್ತಿರುವುದು ನಿಜವೇ ಆಗಿದ್ದಲ್ಲಿ, ಇದು ಇಂತಹ ಮೊತ್ತಮೊದಲ ಪ್ರಕರಣ ಎಂದು ದಾಖಲಾಗಲಿದೆ. ಇದುವರೆಗೆ ಭಾರತೀಯ ಭಯೋತ್ಪಾದಕರು ಅಂತಾರಾಷ್ಟ್ರೀಯ ಜಿಹಾದಿ ಭಯೋತ್ಪಾದನೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ಪ್ರಕರಣಗಳು ಖಚಿತವಾಗಿರಲಿಲ್ಲ.
ಈ ಅಲ್ ಸಹಾಬ್ ಎನ್ನುವುದು ಸಾಮಾನ್ಯ ಇಸ್ಲಾಮಿಕ್ ಭಯೋತ್ಪಾದಕ ಗುಂಪಲ್ಲ. ಇದೇ ವರ್ಷದ ಫೆಬ್ರವರಿಯಲ್ಲಷ್ಟೇ ತಾನು ಅಲ್‌ಖೈದಾದ ಹಿಂಬಾಲಕ ಎಂದು ಘೋಷಿಸಿಕೊಂಡಿದ್ದ ಸಂಘಟನೆ, ಪಾಶ್ಚಿಮಾತ್ಯ ತಜ್ಞರು ವ್ಯಕ್ತಪಡಿಸಿದ್ದ ಶಂಕೆಯನ್ನು ನಿಜ ಮಾಡಿತ್ತು.
ಅಲ್ ಶಾಬಾಬ್ ಸಂಘಟನೆಯು ಕಾಶ್ಮೀರದಲ್ಲಿ ಹೋರಾಟ ಮಾಡುತ್ತಿದೆಯೇ ಎಂಬುದರ ಕುರಿತು ಯಾವುದೇ ಖಚಿತ ಮಾಹಿತಿಗಳಿಲ್ಲ. ಆದರೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಬೇಕೆಂಬುದು ತನ್ನ ನಿಲುವು ಎಂದು ಈ ಹಿಂದೆ ಅದು ಹೇಳಿಕೊಂಡಿತ್ತು.
ಭಯೋತ್ಪಾದನಾ ವಿಶ್ಲೇಷಕ ಬಿ. ರಮಣ್ ಅವರ ಪ್ರಕಾರ, ಪಾಕಿಸ್ತಾನದ 'ತಾಬ್ಲಿಗಿ ಜಮಾತ್' ಸಂಘಟನೆಯು ಸೋಮಾಲಿಯಾದಲ್ಲಿ ಸಕ್ರಿಯವಾಗಿದೆ. ಅದು ಅಲ್ ಶಬಾಬ್ ಸಂಘಟನೆಗೆ ತನ್ನ ಹೋರಾಟಗಾರರನ್ನು ಕಳುಹಿಸಿಕೊಡುತ್ತಾ ಬಂದಿದೆ. ಒಂದು ವೇಳೆ ಭಾರತೀಯರು ಅಲ್ಲಿ ಪತ್ತೆಯಾಗಿರುವುದು ನಿಜವೇ ಆಗಿದ್ದಲ್ಲಿ, ಅದು ತಾಬ್ಲಿಗಿ ಮೂಲಕ ಹೋಗಿದ್ದಿರಬಹುದು ಎಂದಿದ್ದಾರೆ.
ಅಲ್ ಶಬಾಬ್‌ನಲ್ಲಿ ಭಾರತೀಯರಿರುವುದು ಇದುವರೆಗೆ ಸಂಘಟನೆಯಿಂದ ಘೋಷಿಸಲ್ಪಟ್ಟಿಲ್ಲ. ಒಂದು ಅಂದಾಜಿನ ಪ್ರಕಾರ 2003ರವರೆಗೆ ಸುಮಾರು 200 ಬೋಹ್ರಾ ಮುಸ್ಲಿಮರು ಭಾರತದಿಂದ ಸೋಮಾಲಿಯಾಕ್ಕೆ ವಸ್ತ್ರೋದ್ಯಮಕ್ಕೆಂದು ತೆರಳಿದ್ದರು. ನಂತರದ ದಿನಗಳಲ್ಲಿ ಅವರು ಕೀನ್ಯಾದ ಮೊಂಬಾಸಾದಲ್ಲಿ ನೆಲೆಗೊಂಡಿದ್ದರು. ಆದರೆ ಅವರು ಉಗ್ರ ಸಂಘಟನೆಗಳ ಜತೆ ಸಂಬಂಧವಿಟ್ಟುಕೊಂಡ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.
ಹಾಗೊಂದು ವೇಳೆ ಅಲ್ ಶಬಾಬ್ ಭಾರತೀಯ ಮೂಲದ ಉಗ್ರರನ್ನು ಹೊಂದಿದ್ದೇ ಆದಲ್ಲಿ, ಅದು ಪೂರ್ವ ಆಫ್ರಿಕಾ ಅಥವಾ ಇಂಗ್ಲೆಂಡ್ ಮೂಲಗಳಿಂದ ನೇಮಕ ಮಾಡಿಕೊಂಡ ಭಾರತೀಯ ಮುಸ್ಲಿಮರಿರಬಹುದು. ಈ ರೀತಿ ಅಲ್‌ಖೈದಾ ಸಂಘಟನೆಗೆ ಸೇರಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಆದರೂ ಇವ್ಯಾವುದೂ ಖಚಿತಗೊಂಡಿಲ್ಲ. ಹಾಗಾಗಿ ಭಾರತ ಸರಕಾರವು ಮೊಗಾದಿಶು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಭಾರತೀಯರು ಪಾಲ್ಗೊಂಡಿರುವ ವಿಚಾರದ ಕುರಿತು ತನಿಖೆ ನಡೆಸಬೇಕು ಎಂದು ರಮಣ್ ಒತ್ತಾಯಿಸಿದ್ದಾರೆ.