ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣು ಬಾಧ್ಯತಾ ಮಸೂದೆ- ಸರಕಾರಕ್ಕೆ ಬೆಂಬಲವಿಲ್ಲ: ಬಿಜೆಪಿ
(BJP | Nuclear Liability Bill | Prithviraj Chavan | Arun Jaitley)
ಪರಮಾಣು ಬಾಧ್ಯತಾ ಮಸೂದೆಯಲ್ಲಿನ ಕೆಲವು ಪ್ರಸ್ತಾವಿತ ತಿದ್ದುಪಡಿಗಳಿಗೆ ಎಡ ಮತ್ತು ಬಲಪಂಥೀಯರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ಬರುತ್ತಿರುವಂತೆ ಬಿಜೆಪಿಯನ್ನು ಒಲಿಸಿಕೊಳ್ಳಲು ಸರಕಾರವು ಯತ್ನಿಸಿದೆಯಾದರೂ, ಈ ನಡೆಯ ಹಿಂದಿನ ಉದ್ದೇಶಗಳ ಕುರಿತು ಸಂಶಯಗಳನ್ನು ವ್ಯಕ್ತಪಡಿಸಿರುವ ಪ್ರಮುಖ ಪ್ರತಿಪಕ್ಷವು ಬದಲಾವಣೆಗಳನ್ನು ಕೈಬಿಡದ ಹೊರತು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ವಾರಾಂತ್ಯದಲ್ಲಿ ಸಂಸತ್ತಿಗೆ ತಲುಪಲಿರುವ ಮಸೂದೆಯನ್ನು ತಾವು ಬೆಂಬಲಿಸುವುದಿಲ್ಲ ಎಂದು ಬಿಜೆಪಿ ಮತ್ತು ಎಡಪಕ್ಷಗಳು ಮುನಿಸಿಕೊಂಡಿರುವುದರಿಂದ ಸಂಧಾನಕ್ಕೆ ತೊಡಗಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಪೃಥ್ವಿರಾಜ್ ಚೌಹಾನ್ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಸಭೆಯ ನಂತರ ಪ್ರತಿಕ್ರಿಯಿಸಿರುವ ಜೇಟ್ಲಿ, ಸಂಸದೀಯ ಸ್ಥಾಯಿ ಸಮಿತಿಯು ಪರಿಶೀಲನೆ ಮಾಡಿ ಸಲಹೆ ಮಾಡಿದ್ದ ಪರಿಭಾಷೆಯನ್ನು ಅಧಿನಿಯಮ 17(ಬಿ)ಯಲ್ಲಿ ಸೇರಿಸಿದಲ್ಲಿ ಬಿಜೆಪಿಯು ಬೆಂಬಲ ನೀಡುವ ಕುರಿತು ಯೋಚಿಸುತ್ತದೆ ಎಂದು ತಾನು ಚೌಹಾನ್ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.
ಪರಮಾಣು ಅವಘಡ ಸಂದರ್ಭದಲ್ಲಿ ಪೂರೈಕೆದಾರರ ಹೊಣೆಯ ಪ್ರಮಾಣವನ್ನು ನಿರ್ಧರಿಸುವ ಅಧಿನಿಯಮ ಸೇರಿದಂತೆ 18 ತಿದ್ದುಪಡಿಗಳನ್ನು ಕಳೆದ ಶುಕ್ರವಾರ ಕೇಂದ್ರ ಸಂಪುಟವು ಅಂಗೀಕರಿಸಿದ ನಂತರ ಪ್ರತಿಪಕ್ಷಗಳು ಅದರ ವಿರುದ್ಧ ಸೊಲ್ಲೆತ್ತುತ್ತಿವೆ.
ಅಧಿನಿಯಮ 17(ಬಿ)ಯ ಪ್ರಕಾರ ಅವಘಡವೊಂದು ಸಂಭವಿಸಿದ ಸಂದರ್ಭದಲ್ಲಿ ಇದು ಪೂರೈಕೆದಾರ ಅಥವಾ ಅದರ ಉದ್ಯೋಗಿಗಳಿಂದ ಉದ್ದೇಶ ಪೂರ್ವಕವಾಗಿ ನಡೆದ ಹಾನಿ ಎಂದು ಪರಮಾಣು ಸ್ಥಾವರದ ನಿರ್ವಹಣೆಗಾರನು ಪರಿಹಾರ ಬಯಸಿದ ಸಂದರ್ಭದಲ್ಲಿ ಮಾತ್ರ ಹೊಣೆಗಾರರನ್ನಾಗಿಸುವ ವಿಧಿ. ಇದರ ಬಗ್ಗೆ ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ.
ಅಧಿನಿಯಮ 17(ಬಿ) ಕುರಿತು ಸ್ಥಾಯಿ ಸಮಿತಿಯು ಬಳಸಿದ ಪರಿಭಾಷೆಯನ್ನು ಮತ್ತೆ ಜಾರಿಗೆ ತನ್ನಿ. ಅದರ ನಂತರ ನಾವು ಬೆಂಬಲ ನೀಡುವ ಕುರಿತು ಯೋಚಿಸುತ್ತೇವೆ ಎಂದು ಜೇಟ್ಲಿ ಈ ಕುರಿತು ಪಕ್ಷದ ನಿಲುವನ್ನು ಸರಕಾರಕ್ಕೆ ರವಾನಿಸಿದ್ದಾರೆ.
ಕಳಪೆ ಸಾಮಗ್ರಿ, ದೋಷಪೂರಿತ ಪರಿಕರಗಳ ಪೂರೈಕೆ ಅಥವಾ ಅನುಷ್ಠಾನ ಅಥವಾ ಸಾಮಗ್ರಿ, ಪರಿಕರ ಅಥವಾ ಕಾರ್ಯಗಳಲ್ಲಾದ ಅಥವಾ ಪೂರೈಕೆಯಲ್ಲಾದ ಒಟ್ಟಾರೆ ನಿರ್ಲಕ್ಷ್ಯದಿಂದ ವ್ಯಕ್ತ ಅಥವಾ ಅವ್ಯಕ್ತ ಪರಿಣಾಮಗಳಿಂದ ಪರಮಾಣು ಅವಘಡ ಸಂಭವಿಸಿದರೆ ನಷ್ಟ ಪರಿಹಾರಕ್ಕಾಗಿ ಪೂರೈಕೆದಾರರಲ್ಲಿ ನಿರ್ವಹಣೆದಾರ ಬೇಡಿಕೆ ಮುಂದಿಡಬಹುದು ಎಂದು ಅಧಿನಿಯಮ 17(ಬಿ) ಕುರಿತು ಸ್ಥಾಯಿ ಸಮಿತಿಯು ಶಿಫಾರಸು ಮಾಡಿತ್ತು.
ಇದನ್ನು ಸರಕಾರವು ತಿದ್ದುಪಡಿ ಮಾಡಿರುವುದು ಹೀಗೆ: ಪರಮಾಣು ಅವಘಡವೊಂದು ಪೂರೈಕೆದಾರರ ಅಥವಾ ಅದರ ನೌಕರರಿಂದ ಉದ್ದೇಶಪೂರ್ವಕವಾಗಿ ಹಾನಿಯಾಗಬೇಕೆಂದು ಘಟಿಸುವಂತೆ ಮಾಡಿದ್ದರೆ ನಿರ್ವಹಣೆದಾರರು ಪೂರೈಕೆದಾರರಿಂದ ಪರಿಹಾರ ನಿರೀಕ್ಷಿಸಬಹುದು. ಪ್ರತ್ಯಕ್ಷ ಅಥವಾ ಪರೋಕ್ಷ ದೋಷಗಳು ಅಥವಾ ಕಳಪೆ ದರ್ಜೆ ಸೇವೆಗಳಿರುವ ಸಾಮಗ್ರಿಗಳನ್ನು ಪೂರೈಕೆ ಮಾಡಿರುವುದನ್ನು ಇದು ಒಳಗೊಂಡಿರುತ್ತದೆ.
ಸರಕಾರವು ತಿದ್ದುಪಡಿ ಮಾಡಿರುವ 'ಉದ್ದೇಶಪೂರ್ವಕ' ಎಂಬ ಶಬ್ದದ ಕುರಿತು ಬಿಜೆಪಿ ತನ್ನ ಆತಂಕ ವ್ಯಕ್ತಪಡಿಸುತ್ತಿದೆ.
ಮಸೂದೆಯನ್ನು ಈಗ ಇರುವ ಸ್ಥಿತಿಯಲ್ಲಿ ಬೆಂಬಲಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿಯ ವಕ್ತಾರ ರಾಜೀವ್ ಪ್ರತಾಪ್ ರೂಢಿಯವರೂ ಹೇಳಿದ್ದಾರೆ.