ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ವಯಂವರದಲ್ಲಿ ಜಂಟಿಯಾದ 55ರ ವಧು -52ರ ವರ! (swayamvar | Ahmedabad | Bhanumati Vyas | Rajendra Rawal)
Bookmark and Share Feedback Print
 
ಮಕ್ಕಳು-ಮೊಮ್ಮಕ್ಕಳಿದ್ದರೂ ತಮ್ಮನ್ನು ಅರ್ಥ ಮಾಡಿಕೊಳ್ಳುವ ಸಮಾನ ಮನಸ್ಕರಿಲ್ಲದೆ ಏಕಾಂಗಿತನವನ್ನು ಅನುಭವಿಸುತ್ತಿರುವ ಇಬ್ಬರು ಇಳಿ ವಯಸ್ಸಿನವರ ಇಷ್ಟಾನಿಷ್ಟಗಳು ಹೇಗಿರುತ್ತವೆ ಎಂಬುದನ್ನು ನವಿರಾಗಿ ದೃಶ್ಯರೂಪಕ್ಕಿಳಿಸಿದ್ದ ಕವಿತಾ ಲಂಕೇಶ್ ಅವರ 'ಪ್ರೀತಿ ಪ್ರೇಮ ಪ್ರಣಯ' ಚಿತ್ರವನ್ನು ನೆನಪಿಸುವ ಪ್ರಸಂಗವಿದು. ಆದರೆ 'ಸ್ವಯಂವರ'ವನ್ನು ಏರ್ಪಡಿಸಿದ್ದು ಮಾತ್ರ ಅದಕ್ಕೊಂದು ವ್ಯತಿರಿಕ್ತ.

ಹಾಗೂ ಹೀಗೂ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ಮೂವರು 'ವರ'ರಲ್ಲಿ ಓರ್ವನನ್ನು ಜನಮತದ ಆಧಾರದಲ್ಲಿ 'ವಧು' ಆಯ್ಕೆ ಮಾಡಿದ್ದಾರೆ. ಹೀಗೆ ಆಯ್ಕೆಯಾದವರು ಪಠಾಣ್ ಎಂಬಲ್ಲಿನ ಜ್ಯೋತಿಷಿ.
PR

ಇದು ನಡೆದಿರುವುದು ಗುಜರಾತಿನ ಅಹಮದಾಬಾದ್‌ನಲ್ಲಿ. 55ರ ಹರೆಯ ಚಿರಯೌವ್ವನೆ ಭಾನುಮತಿ ವ್ಯಾಸ್ ಅವರಿಗಾಗಿ ಸ್ವಯಂವರವನ್ನು ಏರ್ಪಡಿಸಲಾಗಿತ್ತು. ಭಾನುಮತಿಯವರ ಕೈ ಹಿಡಿದು ಗಂಡನಾದವರು ರಾಜೇಂದ್ರ ರಾವಲ್- ಆಕೆಗಿಂತ ಮೂರು ವರ್ಷ ಜೂನಿಯರ್.

ಇಂತಹ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಿರಿಯ ಜೀವಗಳಿಗೆ ತಮ್ಮ ಜೋಡಿಯನ್ನು ಹುಡುಕಲು ಸಹಾಯ ಮಾಡುತ್ತಾ ಬಂದಿರುವ 'ವೀಣಾ ಮೂಲ್ಯ ಅಮೂಲ್ಯ ಸೇವಾ' (ವಿಎಂಎಎಸ್) ಎಂಬ ಸಮಾಜ ಸೇವಾ ಸಂಘಟನೆ.

ಎರಡನೇ ಗಂಡ ಎರಡು ವರ್ಷಗಳ ಹಿಂದೆ ತೀರಿಕೊಂಡ ನಂತರ ಸ್ವಂತ ಮಗನಿಂದಲೂ ನಿರ್ಲಕ್ಷ್ಯಕ್ಕೊಳಗಾಗಿ ದೂರವಾಗಿದ್ದ ಭಾನುಮತಿಯವರು ವಿಧವೆಯಾಗಿ ಪಠಾಣ್ ಜಿಲ್ಲೆಯಲ್ಲಿನ ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದರು. ವರ ರಾಜೇಂದ್ರ ಕೂಡ ಇದೇ ರೀತಿ ಪತ್ನಿಯನ್ನು ಕಳೆದುಕೊಂಡು ಒಂಟಿ ಜೀವನ ಸಾಗಿಸುತ್ತಿದ್ದವರು. ಹಾಗಾಗಿ ಜತೆಯಾಗುವ ಮೂಲಕ ಅಂತಿಮ ದಿನಗಳನ್ನು ಸಂತಸದಿಂದ ಕಳೆಯುವ ನಿರ್ಧಾರಕ್ಕೆ ಬಂದಿದ್ದರು.

ಅಂದ ಹಾಗೆ ಭಾನುಮತಿಯವರನ್ನು ವರಿಸಲು ಗುಜರಾತ್‌ನಾದ್ಯಂತದಿಂದ ನೂರಾರು ಮಂದಿ ಮುಂಜಾನೆಯೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ್ದರು. ಅವರಲ್ಲಿ 36 ಮಂದಿ ಅರ್ಹರೆಂದು ತಮ್ಮ ಅರ್ಜಿಯನ್ನೂ ಯಶಸ್ವಿಯಾಗಿ ಗುಜರಾಯಿಸಿದ್ದರು. ಕೆಲವರಂತೂ ಮಲ್ಲೆ ಹೂವಿನ ದಂಡೆಯೊಂದಿಗೆ ಆಗಮಿಸಿ, ಆರ್ಥಿಕ ಭದ್ರತೆ ನೀಡುವ ಭರವಸೆಯನ್ನೂ ನೀಡಿದ್ದರು.

ರಾಖಿ ಸಾವಂತ್ ಅಥವಾ ರಾಹುಲ್ ಮಹಾಜನ್ ಅವರಂತೆ ತೀರಾ ರೊಮ್ಯಾಂಟಿಕ್ ಆಗಿ ನಡೆಯುವ ಬದಲು ವಿಶಿಷ್ಟವಾಗಿ ನಡೆದ ಈ ಸ್ವಯಂವರದಲ್ಲಿ ಕೊನೆಯ ಸುತ್ತಿಗೆ ಉಳಿದುಕೊಂಡಿದ್ದವರು ರಾಜೇಂದ್ರ ರಾವಲ್, ಜಯಸುಖ್ ಪಟೇಲ್ ಮತ್ತು ಅಶೋಕ್ ಶಾ ಎಂಬ ಮೂವರು ಮಾತ್ರ. ಕೊನೆಯ ಹಂತದಲ್ಲಿ ಶಾ ಹೊರಗುಳಿದಾಗ ಮನಸುಖ್ ಮಜೀತಿಯಾ ಎಂಬವರು ಅವಕಾಶ ಪಡೆದರು.

ಹೀಗೆ ಮೂವರೂ ವೇದಿಕೆಯಲ್ಲಿ ಭಾನುಮತಿಯವರ ನಿರೀಕ್ಷೆಯಲ್ಲಿ ನಿಂತಿದ್ದರು. ಈ ಹಂತದಲ್ಲಿ ತನ್ನ ಗಂಡನನ್ನಾಗಿ ಆಯ್ಕೆ ನಡೆಸಲು ಚೌಕಾಸಿ ಬುದ್ಧಿ ತೋರಿಸಿದ ವಧು, ಹಾರವನ್ನು ಕೈಯಲ್ಲಿ ಹಿಡಿದುಕೊಂಡು ಹಲವು ಸುತ್ತುಗಳನ್ನು ಹಾಕಿದರು.

ಭಾನುಮತಿಯವರು ತನ್ನ ಆಯ್ಕೆಗಾಗಿ ಪರದಾಟ ನಡೆಸುತ್ತಿರುವುದನ್ನು ಮನಗಂಡ ಸಂಘಟಕರು, 'ವರ'ನ ಆಯ್ಕೆಯ ಕುರಿತು ಸಲಹೆ ನೀಡುವಂತೆ ಪ್ರೇಕ್ಷಕರನ್ನು ಕೇಳಿಕೊಂಡರು. ಈ ಹಂತದಲ್ಲಿ ಪ್ರೇಕ್ಷಕರು ಬೆಂಬಲಿಸಿದ್ದು ರಾಜೇಂದ್ರ ರಾವಲ್ ಅವರನ್ನು. ಅವರಿಗೆ ಹಾರ ಹಾಕುವ ಮೂಲಕ ಇಬ್ಬರೂ ಪತಿ-ಪತ್ನಿಯರಾದರು.

ರಾಜೇಂದ್ರ ಅವರೊಂದಿಗೆ ಬದುಕಿನ ಕೊನೆಯ ದಿನಗಳನ್ನು ಸಂತಸದಿಂದ ಕಳೆಯುವುದಾಗಿ ಭಾನುಮತಿ ಹೇಳಿಕೊಂಡಿದ್ದಾರೆ. ಅವರ ಒಂಟಿ ಜೀವನ ಜಂಟಿಯಾಗಿ ಸುಖಕರವಾಗಿರಲೆಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ