ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗರಿಗೆದರುತ್ತಿದೆ ಕಾವೇರಿ ವಿವಾದ; ದೆಹಲಿಯಲ್ಲಿ ರಾಜ್ಯಗಳ ಸಭೆ
(Cauvery water dispute | Karnataka | SV Ranganath | Tamil Nadu)
ಗರಿಗೆದರುತ್ತಿದೆ ಕಾವೇರಿ ವಿವಾದ; ದೆಹಲಿಯಲ್ಲಿ ರಾಜ್ಯಗಳ ಸಭೆ
ನವದೆಹಲಿ, ಮಂಗಳವಾರ, 24 ಆಗಸ್ಟ್ 2010( 13:37 IST )
ಕಾವೇರಿ ನೀರು ಹಂಚಿಕೆ ವಿವಾದ ಮತ್ತೆ ಗರಿಗೆದರುತ್ತಿದೆ. ಮಳೆಯ ಅಭಾವದಿಂದಾಗಿ ನೆರೆ ರಾಜ್ಯಗಳಿಗೆ ನೀರು ಹಂಚುವಲ್ಲಿ ಅಸಹಾಯಕತೆ ವ್ಯಕ್ತಪಡಿಸಿರುವ ಕರ್ನಾಟಕದ ವಿರುದ್ಧ ಇತರ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರೀಯ ಜಲ ಆಯೋಗವು ನಾಲ್ಕು ರಾಜ್ಯಗಳ ಸಭೆ ನಡೆಸುತ್ತಿದೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಕಾವೇರಿ ಜಲ ಹಂಚಿಕೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಕಾವೇರಿ ಜಲ ವಿವಾದದ ಕುರಿತು ಇತ್ತೀಚಿನ ವರ್ಷಗಳಲ್ಲಿ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆದದ್ದೇ ಇಲ್ಲ ಎಂದು ಹೇಳಲಾಗಿದ್ದು, ಇಂದು ನಡೆಯುತ್ತಿರುವ ಸಭೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಪಾಲ್ಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಮೂಲಗಳ ಪ್ರಕಾರ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ, ಕೇಂದ್ರೀಯ ಜಲ ಆಯೋಗ ಮತ್ತು ಜಲ ಸಚಿವಾಲಯಕ್ಕೆ ದೂರು ನೀಡಿ, ಕಾವೇರಿ ಮಧ್ಯಂತರ ತೀರ್ಪಿನಂತೆಯೇ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಹೆಚ್ಚು ನೀರು ಬಿಡಬೇಕು ಎಂಬ ತಮಿಳುನಾಡಿನ ಮನವಿಯನ್ನು ಕರ್ನಾಟಕ ಪುರಸ್ಕರಿಸಿರಲಿಲ್ಲ. ರಾಜ್ಯದಲ್ಲಿ ಸಾಕಷ್ಟು ಮಳೆಯಾಗದೇ ಇದ್ದ ಕಾರಣ ತನ್ನ ಅಸಹಾಯಕತೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ನಾಲ್ಕು ರಾಜ್ಯಗಳ ಕಾರ್ಯದರ್ಶಿಗಳ ಸಭೆಯನ್ನು ಜಲ ಆಯೋಗವು ಕರೆದಿದ್ದು, ಜಲ ಹಂಚಿಕೆ ಕುರಿತು ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳುತ್ತಿದೆ.
ಇದುವರೆಗೆ ಕರ್ನಾಟಕವು ತಮಿಳುನಾಡಿಗೆ 44 ಟಿಎಂಸಿ ನೀರನ್ನು ಬಿಡಬೇಕಿತ್ತು. ಆದರೆ ಕೇವಲ 30 ಟಿಎಂಸಿಯನ್ನಷ್ಟೇ ಬಿಟ್ಟಿದೆ. ಇದಕ್ಕೆ ನೀಡಿರುವ ಕಾರಣ ರಾಜ್ಯದಲ್ಲಿ ಸಾಕಷ್ಟು ಮಳೆಯಾಗದೇ ಇರುವುದು.
ಮಳೆಯ ಅಭಾವವನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ರಾಜ್ಯಗಳಿಗೂ ನ್ಯಾಯ ಸಿಗುವ ರೀತಿಯ ನಡೆಯೊಂದಕ್ಕೆ ಬರಲಾಗುತ್ತದೆ ಎಂದು ಜಲ ಆಯೋಗದ ಮೂಲಗಳು ತಿಳಿಸಿವೆ.