ಕೆಂಪು ಉಗ್ರರು ಹೋರಾಟಗಾರರು ಹೌದು, ಆದರೆ ಸನ್ಯಾಸಿಗಳಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಅವರು ತಮ್ಮ ಕಾಮತೃಷೆಯನ್ನು ಯಾವ ರೀತಿಯಲ್ಲಿ ತೀರಿಸಿಕೊಳ್ಳುತ್ತಾರೆ, ಅವರ ಪಾಳಯದಲ್ಲಿ ಕೂಡ ಲೈಂಗಿಕ ಕಿರುಕುಳಗಳಿವೆಯೇ ಎಂಬುದು ಇದುವರೆಗೆ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ.
ಆದರೆ ಇದೀಗ ಮಾವೋವಾದಿಯಾಗಿದ್ದ ಯುವತಿಯೊಬ್ಬಳು ಅಲ್ಲಿನ ಕಾಮಕಾಂಡಗಳನ್ನು ಬಹಿರಂಗಪಡಿಸಿದ್ದಾಳೆ. ನಕ್ಸಲ್ ನಾಯಕರು ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ, ಅತ್ಯಾಚಾರ ಸಾಮಾನ್ಯ ಮತ್ತು ತಾನು ಕೂಡ ಅದೇ ರೀತಿಯ ಕೂಟಕ್ಕೆ ಆಹಾರವಾದವಳು ಎಂದು ತಿಳಿಸಿದ್ದಾಳೆ.
PTI
ಜಾರ್ಖಂಡ್ ಮಾವೋವಾದಿಗಳ ವಲಯದ ಲೇಡಿ ಕಮಾಂಡರ್ ಎಂದು ಹೆಸರು ಮಾಡಿದ್ದ 23ರ ಹರೆಯದ ಈಕೆಯ ಹೆಸರು ಶೋಭಾ ಮಂಡಿ. ಉಮಾ ಮತ್ತು ಶಿಖಾ ಎಂದೂ ಗುರುತಿಸಿಕೊಳ್ಳುತ್ತಿದ್ದಳು. ತಾನು ಬಿಜೆಪಿಯ ಮಾಜಿ ನಾಯಕಿ ಉಮಾ ಭಾರತಿಯವರಂತೆ ಕಾಣುತ್ತಿದ್ದೇನೆ ಎಂಬ ಕಾರಣಕ್ಕೆ ಉಮಾ ಎಂದು ಕರೆಯಲಾಗುತ್ತಿತ್ತು ಎಂದು ಇಲ್ಲದ ಮುಗುಳ್ನಗುವನ್ನು ತಂದುಕೊಂಡು ಹೇಳುತ್ತಾಳೆ.
ಆರು ವರ್ಷದಿಂದ ಅತ್ಯಾಚಾರ... ಶೋಭಾಳ ಕಥೆಯನ್ನು ಆಕೆಯ ಬಾಯಲ್ಲೇ ಕೇಳಿ- ಏಳು ವರ್ಷಗಳ ಹಿಂದಿನ ಕಥೆಯಿದು. ನಾನು ನಕ್ಸಲ್‌ವಾದವನ್ನು ಒಪ್ಪಿ ಅವರ ಶಿಬಿರ ಸೇರಿದ್ದ ಮೊದಲ ವರ್ಷವಿರಬೇಕು. ನನ್ನನ್ನು ಜಾರ್ಖಂಡ್‌ನ ಫಾರೆಸ್ಟ್ ಕ್ಯಾಂಪ್ ಒಂದರಲ್ಲಿ ರಾತ್ರಿ ಪಹರೆಗೆ ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕತ್ತಲೆಯಿಂದ ಬಂದ ಬಿಕಾಸ್ ಎಂಬಾತ (ಆತ ಈಗ ನಕ್ಸಲ್ ಮಿಲಿಟರಿ ಆಯೋಗದ ರಾಜ್ಯ ಮುಖ್ಯಸ್ಥ) ನೀರು ಕೇಳಿದ. ನೀರು ತರಲೆಂದು ತಿರುಗುತ್ತಿದ್ದಂತೆ ನನ್ನನ್ನು ಅಪ್ಪಿಕೊಂಡು, ಅಶ್ಲೀಲವಾಗಿ ವರ್ತಿಸತೊಡಗಿದ.
ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ಉಸಿರುಗಟ್ಟಿಸಿ ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ. ನಂತರ ಆತ ಬಲವಂತವಾಗಿ ನನ್ನ ಅತ್ಯಾಚಾರ ಮಾಡಿದ. ಆಗ ನನಗೆ ಕೇವಲ 17ರ ವಯಸ್ಸು.
ಇದನ್ನು ಯಾರಲ್ಲೂ ಹೇಳದಂತೆ ನನಗೆ ಎಚ್ಚರಿಕೆ ಬೇರೆ ನೀಡಿದ್ದ. ಆದರೂ ನಾನು ಆಕಾಶ್‌ಗೆ (ಕಿಶನ್‌ಜೀ ಬಂಟ) ದೂರು ನೀಡಿದೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಆಕಾಶ್ ಹೇಳಿದ. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದ. ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದ್ದವು. ಹಲವರಿಂದ ನಾನು ಬಲವಂತಕ್ಕೊಳಗಾದೆ ಎಂದು ಶೋಭಾ ಆಲಿಯಾಸ್ ಉಮಾ ಹೇಳಿಕೊಂಡಿದ್ದಾಳೆ.
ತಪ್ಪಿಸಿಕೊಳ್ಳಲು ಹರಸಾಹಸ... ತನ್ನ ಸಹವರ್ತಿಗಳು ಮತ್ತು ಮೇಲಿನ 'ಅಧಿಕಾರಿ'ಗಳ ಲೈಂಗಿಕ ಕಿರುಕುಳವನ್ನು ಸಹಿಸಲಾಗದೆ ಶೋಭಾ ಕಾಡಿನಿಂದ ಹೊರ ಬಂದಿದ್ದಾಳೆ. ಅದೂ ಭಾರೀ ಸಾಹಸಪಟ್ಟು ತಪ್ಪಿಸಿಕೊಂಡಿದ್ದಾಳೆ.
ನಾಲ್ಕು ತಿಂಗಳ ಹಿಂದೆ 25ರಿಂದ 30 ಮಂದಿ ನಕ್ಸಲರ ತಂಡವನ್ನು ಮುನ್ನಡೆಸುವ ಛಾತಿ ಹೊಂದಿದ್ದ ಶೋಭಾ, ತಾನು ವೈದ್ಯಕೀಯ ಪರೀಕ್ಷೆಯ ನೆಪವೊಡ್ಡಿ ತಪ್ಪಿಸಿಕೊಂಡಿದ್ದೇನೆ; ಕೆಲ ಸಮಯದವರೆಗೆ ನನ್ನ ಆಂಟಿಯ ಮನೆಯಲ್ಲಿದ್ದೆ. ಆದರೆ ಈಗ ನಾನು ನನ್ನ ಕಥೆಯನ್ನು ಜಗತ್ತಿಗೆ ಹೇಳಬೇಕೆಂದು ಹೊರ ಬಂದಿದ್ದೇನೆ ಎಂದಿದ್ದಾಳೆ.
ಇದೀಗ ಪೊಲೀಸರಿಗೆ ಶರಣಾಗುವ ಇಚ್ಛೆಯನ್ನೂ ಶೋಭಾ ವ್ಯಕ್ತಪಡಿಸಿದ್ದಾಳೆ. ಕಳೆದ ಕೆಲವು ವರ್ಷಗಳಲ್ಲಿ ಹಲವು ದಾಳಿಗಳನ್ನು ಸಂಘಟಿಸಿರುವ ಈಕೆ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಪ್ರಮುಖ ವ್ಯಕ್ತಿ.
ನಕ್ಸಲರು ಕ್ರೂರ ಕೃತ್ಯಗಳಿಗೆ ಯಾಕೆ ಮುಂದಾಗುತ್ತಿದ್ದಾರೆ, ಅದರ ಹಿಂದಿನ ಕಾರಣಗಳೇನು ಎಂದು ಆಕೆಯಲ್ಲಿ ಪ್ರಶ್ನಿಸಿದರೆ, ತಾನು ಇಂತಹ ಚಟುವಟಿಕೆಗಳು ಮತ್ತು ಕೆಲವು ನಾಯಕರ ಹವ್ಯಾಸಗಳನ್ನು ಕಿಶನ್‌ಜೀಯವರ ಮುಂದೆಯೇ ಪ್ರತಿಭಟಿಸಿದ್ದೆ; ಆದರೆ ಅಂತಹ ಧೈರ್ಯ ತೋರಿಸಿದ್ದಕ್ಕಾಗಿ ನನ್ನನ್ನು ಮೂಲೆಗುಂಪು ಮಾಡಲಾಯಿತು, ಕಠಿಣ ಎಚ್ಚರಿಕೆಗಳನ್ನು ನೀಡಲಾಯಿತು ಎಂದು ವಿವರಣೆ ನೀಡಿದ್ದಾಳೆ.
ಸೆಕ್ಸ್ ನಕ್ಸಲರಲ್ಲಿ ಸಾಮಾನ್ಯ... ಮಾವೋವಾದಿ ನಾಯಕರು ಒಬ್ಬರಿಗಿಂತ ಹೆಚ್ಚು ಮಂದಿಯ ಜತೆ ಲೈಂಗಿಕ ಸಂಬಂಧ ಹೊಂದಿರುವುದು ಸಾಮಾನ್ಯ. ಇದೇನೂ ಅಚ್ಚರಿಯ ವಿಚಾರವಲ್ಲ. ಅಲ್ಲದೆ ಉನ್ನತ ನಕ್ಸಲ್ ನಾಯಕರಿಂದ ಲೈಂಗಿಕ ಕಿರುಕುಳವೂ ಹೊಸತೇನಲ್ಲ ಎಂದು ಶೋಭಾ ತಿಳಿಸಿದ್ದಾಳೆ.
ನಕ್ಸಲ್ ನಾಯಕ ಕಿಶನ್‌ಜೀ ಮತ್ತೊಬ್ಬ ನಾಯಕ ಆಕಾಶ್ ಪತ್ನಿಯ ಜತೆಗೆ ಸಂಬಂಧ ಹೊಂದಿದ್ದಾನೆ. ಆಕಾಶ್ ಎಂಬುವವನು ಕಿಶನ್‌ಜೀಯ ಬಲಗೈ ಬಂಟ ಮತ್ತು ರಾಜ್ಯ ಸಮಿತಿಯ ಸದಸ್ಯನೂ ಹೌದು ಎಂದಿರುವ ಶೋಭಾ, ಹಿರಿಯ ಮಾವೋವಾದಿಗಳು ಬಹುತೇಕ ಮಹಿಳಾ ನಕ್ಸಲರನ್ನು ತಮ್ಮ ದೈಹಿಕ ತೃಷೆಗಳಿಗಾಗಿ ಬಳಸಿಕೊಳ್ಳುತ್ತಾರೆ; ನಕ್ಸಲ್ ಗುಂಪಿನಲ್ಲಿರುವ ಹಿರಿಯ ಮಹಿಳಾ ನಾಯಕಿಯರು ಕೂಡ ಒಬ್ಬರಿಗಿಂತ ಹೆಚ್ಚು ಪುರುಷರ ಜತೆ ದೈಹಿಕ ಸಂಬಂಧ ಹೊಂದಿದ್ದಾರೆ ಎಂದಿದ್ದಾಳೆ.
ಈ ರೀತಿಯಾಗಿ ಸಂಬಂಧ ಬೆಳೆಸಿದ ಸಂದರ್ಭದಲ್ಲಿ ಮಹಿಳೆಯರು ಗರ್ಭಿಣಿಯರಾದರೆ ಏನು ಮಾಡುತ್ತಾರೆ ಎಂಬ ಕುರಿತೂ ಶೋಭಾ ವಿವರಣೆ ನೀಡಿದ್ದಾಳೆ. ಮಾವೋವಾದಿಗಳಿಗೆ ಮಕ್ಕಳೆಂದರೆ ಎಲ್ಲಾ ವಿಚಾರಗಳಿಗೂ ತೊಂದರೆಯಾಗುವುದರಿಂದ ಅವರಿಗಿರುವ ಏಕೈಕ ಆಯ್ಕೆ ಅಬಾರ್ಷನ್. ಅದನ್ನೇ ಮಾಡಿಸುತ್ತಾರಂತೆ.
ಸೀಮಾಳನ್ನು ಆಕಾಶ್ ಅತ್ಯಾಚಾರ ಮಾಡಿದ್ದ. ಬೆಲ್ಪಾಹರಿ ಸ್ಕ್ವಾಡ್ ಕಮಾಂಡರ್ ಮದನ್ ಮಹತೋ ಪತ್ನಿ ಜಾಬಾ ಎಂಬಾಕೆಯನ್ನು ರಾಹುಲ್ ಆಲಿಯಾಸ್ ರಂಜಿತ್ ಪಾಲ್ ಮಾನಭಂಗ ಮಾಡಿದ್ದ. ಹೀಗೆ ಅತ್ಯಾಚಾರ ಮಾವೋವಾದಿ ಕ್ಯಾಂಪುಗಳಲ್ಲಿ ಮಾಮೂಲಿ. ಇದು ಕೇವಲ ನಕ್ಸಲರ ಶಿಬಿರಗಳಲ್ಲಿ ಮಾತ್ರವಲ್ಲ, ಕೆಲವು ಬಾರಿ ಗ್ರಾಮಗಳಲ್ಲಿನ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾಗ ಅಥವಾ ಆಶ್ರಯ ಪಡೆದಿದ್ದಾಗ, ಆ ಮನೆಯ ಹೆಂಗಸರನ್ನೂ ಅತ್ಯಾಚಾರ ಎಸಗುವುದಿದೆ ಎಂದು ಹಲವು ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ.
ನಕ್ಸಲರು ಜನತೆಯ ಪರವಾಗಿದ್ದಾರೆ, ಬಡವರಿಗಾಗಿ ಹೋರಾಡುತ್ತಿದ್ದಾರೆ ಎಂದು ವಾದಿಸುವ ಬುದ್ಧಿಜೀವಿಗಳಿಗೆ ಶೋಭಾಳಂತಹ ಹೆಣ್ಣು ಮಕ್ಕಳ ಕೂಗು ಬಹುಶಃ ಕೇಳಿಸದು.