ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೆಲಸ 'ಇಲ್ಲ'ದವನಿಂದ ಐಟಿ ಹಬ್‌ಗೆ ಬಾಂಬ್ ಬೆದರಿಕೆ! (Bomb hoax | Kolkata IT hub | Somnath Dhol | India)
Bookmark and Share Feedback Print
 
ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ಕೊಲ್ಕತ್ತಾದ ನೂರಾರು ಪೊಲೀಸರನ್ನು ಉದ್ಯೋಗ ವಂಚಿತನೊಬ್ಬ ಬೇಸ್ತು ಬೀಳಿಸಿರುವ ಘಟನೆ ವರದಿಯಾಗಿದೆ.

ಬಾಂಬ್ ಮಾಹಿತಿಯ ನಂತರ ಕಾರ್ಯಪ್ರವೃತ್ತರಾದ ಪೊಲೀಸರು 1,500 ಮಂದಿ ನೌಕರರನ್ನು ಸ್ಥಳಾಂತರಿಸಿ, ಇಡೀ ಕಟ್ಟಡವನ್ನು ತಪಾಸಣೆ ನಡೆಸಿದ್ದರು. ಆದರೆ ಬಾಂಬ್ ಅಥವಾ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಕೊನೆಗೆ ತಿಳಿದು ಬಂದದ್ದೇನೆಂದರೆ, ಹುಸಿ ಬೆದರಿಕೆ ಹಾಕಿರುವ ವ್ಯಕ್ತಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಕ್ಕೆಂದು ಎಡತಾಕಿದ್ದ ಎಂಬುದು.

ಕೊಲ್ಕತ್ತಾ ನಗರದ ಹೊರವಲಯದ ರಾಜಾರ್ಹಟ್ ಎಂಬಲ್ಲಿನ ಐಟಿ ಹಬ್‌ನ 14 ಮಹಡಿಯ ಕಟ್ಟಡದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಇಂದು ರಾಜಾರ್ಹಟ್ ಪೊಲೀಸ್ ಠಾಣೆಗೆ ಅಪರಿಚಿತ ಕರೆಯೊಂದು ಬಂದಿತ್ತು. ಹಲವು ಐಟಿ ಸಂಸ್ಥೆಗಳು ಕಾರ್ಯಾಚರಿಸುತ್ತಿರುವ ಐಟಿ ಹಬ್‌ನ ಟೆಕ್ನೋಪಾಲಿಸ್ ಕಟ್ಟಡದ ನೆಲ ಮಹಡಿಯಲ್ಲಿ ಬಾಂಬ್ ಇಡಲಾಗಿದ್ದು, ಸ್ಫೋಟಿಸಲಾಗುತ್ತದೆ ಎಂದ ಬೆದರಿಕೆ ಹಾಕಲಾಗಿತ್ತು.

ಕರೆ ಬಂದ ಕೂಡಲೇ ನಾವು ಕಾರ್ಯಪ್ರವೃತ್ತರಾಗಿ ಹುಡುಕಾಟ ನಡೆಸಿದರೂ, ಪತ್ತೆಯಾಗಲಿಲ್ಲ. ಈ ರೀತಿ ಹುಸಿ ಬಾಂಬ್ ಕರೆಯನ್ನು ಮಾಡಿರುವುದು ಸೋಮನಾಥ್ ಧೋಲ್ ಎಂಬ ಯುವಕ. ಆತನನ್ನು ಬಂಧಿಸಲಾಗಿದೆ. ಕೆಲ ಸಮಯದ ಹಿಂದೆ ತನಗೆ ನೌಕರಿ ಬೇಕೆಂದು ಕಂಪನಿಗೆ ಆತ ಹೋಗಿದ್ದ. ಆದರೆ ಕಂಪನಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾತ್ಸವ್ ತಿಳಿಸಿದ್ದಾರೆ.

ಅಪರಿಚಿತ ಬೆದರಿಕೆ ಕರೆ ಬಂದ ಕೂಡಲೇ ನಾವು ಭಾರೀ ಸಂಖ್ಯೆಯ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ದಳಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದೆವು. ಕಟ್ಟಡದಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನು ಸ್ಥಳಾಂತರಗೊಳಿಸಿದ್ದಲ್ಲದೆ, ಸುತ್ತಲಿನ 100 ಮೀಟರ್ ವ್ಯಾಪ್ತಿಯ ಎಲ್ಲಾ ಕಟ್ಟಡಗಳಲ್ಲೂ ತಪಾಸಣೆ ನಡೆಸಿ, ತೆರವುಗೊಳಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವವೃತ ದಾಸ್ ವಿವರಣೆ ನೀಡಿದ್ದಾರೆ.

ಕೆಲ ಉದ್ಯೋಗಿಗಳು ಸೇರಿದಂತೆ ಪ್ರತ್ಯೇಕ್ಷದರ್ಶಿಗಳು ಆರೋಪಿಸುವ ಪ್ರಕಾರ ಘಟನೆಯ ಕುರಿತು ಮಾಹಿತಿ ನೀಡಿದ ಎರಡು ಗಂಟೆಗಳ ನಂತರವಷ್ಟೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸೋಮನಾಥ್ ಬೆದರಿಕೆ ಕರೆಯನ್ನು ನೇರವಾಗಿ ಕಂಪನಿಗೆ ಮಾಡಿದ್ದ.

ಗೊಂದಲದ ವಾತಾವರಣ ಸೃಷ್ಟಿಯಾದ ಹೊತ್ತಲ್ಲಿ ಪತ್ರಕರ್ತರು ಒಳ ಪ್ರವೇಶಿಸಲು ಯತ್ನಿಸಿದ್ದನ್ನು ಕಟ್ಟಡದ ಖಾಸಗಿ ಭದ್ರತಾ ಸಿಬ್ಬಂದಿಗಳು ಯತ್ನಿಸಿದಾಗ ಉದ್ವಿಗ್ನ ವಾತಾವರಣ ಉಂಟಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ