ಯಾರೋ ಒಂದಿಬ್ಬರು ಹಾದಿ ತಪ್ಪಿದ್ದಾರೆಂದು, ಬಿಪಿಒ ಉದ್ಯೋಗ ಮಾಡುತ್ತಿರುವ ಎಲ್ಲರನ್ನೂ ಹಾಗೆಂದು ಪರಿಗಣಿಸಬೇಡಿ ಎಂದು ರಾಜಧಾನಿಯ ಕಾಲ್ ಸೆಂಟರ್ ಉದ್ಯೋಗಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ದೆಹಲಿಯ ಗುರ್ಗಾಂವ್‌ನಲ್ಲಿ ಕಾಲ್ ಸೆಂಟರ್ ಒಂದರಲ್ಲಿ ಜೋಡಿಯೊಂದು ದೈಹಿಕ ಸಂಪರ್ಕ ನಡೆಸಿದ ವೀಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡಿದ ನಂತರ ಕಾಲ್ ಸೆಂಟರುಗಳಲ್ಲಿ ಕೆಲಸ ಮಾಡುವವರನ್ನು 'ಲೂಸ್' ಅಥವಾ ಸುಲಭವಾಗಿ ಸಿಗುವವರು ಎಂಬ ರೀತಿಯಲ್ಲಿ ಭಾವಿಸುತ್ತಿರುವುದಕ್ಕೆ ಪ್ರತಿಯಾಗಿ ಉದ್ಯೋಗಿಗಳು ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಬಿಪಿಒ ಕಂಪನಿಯೊಂದರ ಮೇಲ್ವಿಚಾರಕ ತನ್ನ ಅಧೀನ ಉದ್ಯೋಗಿ ಯುವತಿಯೊಂದಿಗೆ ರಾತ್ರಿ ಹೊತ್ತು ಕಚೇರಿಯಲ್ಲೇ ಸೆಕ್ಸ್ ಮಾಡಿದ್ದ. ಈ ವೀಡಿಯೋದಲ್ಲಿರುವ ಪ್ರಕಾರ ಶಾರ್ಟ್ಸ್ ಮತ್ತು ಟಿ-ಶರ್ಟ್ಸ್ ಧರಿಸಿಕೊಂಡಿರುವ ಯುವತಿ ಕೊಠಡಿಯೊಂದಕ್ಕೆ ಬರುತ್ತಿದ್ದಂತೆ, ತನ್ನ ಮೇಲಿದ್ದ ಬಟ್ಟೆಗಳನ್ನೆಲ್ಲ ಬಿಚ್ಚಿ ಎಸೆಯುತ್ತಾಳೆ.
ಅಶ್ಲೀಲ ವೀಡಿಯೋ ಬಹಿರಂಗವಾದ ನಂತರ ಕಾಲ್ ಸೆಂಟರ್ ಉದ್ಯೋಗಿಗಳ ಕುರಿತು ವ್ಯಕ್ತವಾಗುತ್ತಿರುವ ಅಸಹ್ಯತನಕ್ಕೆ ಬಿಪಿಒ ನೌಕರರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
20ರ ಆಸುಪಾಸಿನಲ್ಲಿರುವ ಬಹುತೇಕ ಕಾಲ್ ಸೆಂಟರ್ ಉದ್ಯೋಗಿಳು, ತಾವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವಾಗ ತಮ್ಮ ಸಹೋದ್ಯೋಗಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾರೆ ಎಂದೇ ಜನಜನಿತವಾಗಿದೆ. ಆದರೆ ಇದು ನಿಜವಲ್ಲ. ಈಗ ಬಹುತೇಕ ಕಂಪನಿಗಳು ತಮ್ಮ ನೌಕರರ ರಾತ್ರಿಯ ಚಲನವಲನಗಳನ್ನು ದಾಖಲಿಸಿಕೊಳ್ಳುತ್ತಿವೆ. ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳುತ್ತಿವೆ. ಇಂತಹ ಘಟನೆಗಳು ನಡೆದಾಗ ಹೆಚ್ಚಿನ ಸಂದರ್ಭಗಳಲ್ಲಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ ಎಂದು ಸೊಹ್ರಾಬ್ ಖಾನ್ ಎಂಬ ಬಿಪಿಒ ಉದ್ಯೋಗಿಯೊಬ್ಬ ಹೇಳಿಕೊಂಡಿದ್ದಾನೆ.
ಮತ್ತೊಂದು ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುವ ಋತಿಕಾ ಎಂಬ ಯುವತಿಯ ಮಾತನ್ನೇ ಕೇಳಿ.
ನಾನು ಕಾಲ್ ಸೆಂಟರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ನಾನು ಸುಲಭವಾಗಿ ಸಿಗುತ್ತೇನೆ ಎಂದು ಅರ್ಥವಲ್ಲ. ಎಲ್ಲಾ ಕಡೆಯೂ ರಾತ್ರಿ ಮತ್ತು ಹಗಲು ಪಾಳಿಗಳಿರುತ್ತವೆ ಮತ್ತು ಇಲ್ಲಿ ಬಹುತೇಕ ಯುವ ಜನತೆಯೇ ಉದ್ಯೋಗಿಗಳಾಗಿರುತ್ತಾರೆ. ಅಕ್ರಮ ಸಂಬಂಧ ಹೊಂದಿದ ಒಂದೆರಡು ಪ್ರಕರಣಗಳು ಎಲ್ಲಾ ಕಂಪನಿಗಳಲ್ಲೂ ಇರಬಹುದು. ಹಾಗೆಂದು ಎಲ್ಲಾ ಬಿಪಿಒ ಉದ್ಯೋಗಿಗಳಿಗೆ ನೈತಿಕತೆ ಇಲ್ಲದವರೆಂದು ಹಣೆಪಟ್ಟಿ ಕಟ್ಟಲಾಗದು ಎಂದಿದ್ದಾಳೆ.
ಇತ್ತೀಚೆಗಷ್ಟೇ ಜಾಗತಿಕ ಸಂಸ್ಥೆಯೊಂದು 24 ರಾಷ್ಟ್ರಗಳ 12,000 ಮಂದಿಯನ್ನು ಸಂದರ್ಶಿಸಿ ನಡೆಸಿದ್ದ ಸಮೀಕ್ಷೆಯಲ್ಲಿ ಭಾರತದ ಶೇ.26ರಷ್ಟು ಮಂದಿ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿತ್ತು. ಚೀನಾದಲ್ಲಿ ಶೇ.18, ಸೌದಿ ಅರೇಬಿಯಾ ಶೇ.16, ಮೆಕ್ಸಿಕೋ ಶೇ.13 ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇದು ಶೇ.10 ಎಂದು ವರದಿ ವಿವರಣೆ ನೀಡಿತ್ತು.