ರಾಜ್ಯದಲ್ಲಿನ ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ಮತ್ತು ನನ್ನನ್ನು ರಾಜಕೀಯವಾಗಿ ಮುಗಿಸುವ ಸಲುವಾಗಿ ಕಾಂಗ್ರೆಸ್ ಸಿಬಿಐಗೆ ನನ್ನ 'ಸುಪಾರಿ' ನೀಡಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಗುಜರಾತಿನ ಪ್ರಗತಿಯನ್ನು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದೇ ಕಾರಣಕ್ಕಾಗಿ ನನ್ನನ್ನು ಮತ್ತು ರಾಜ್ಯದ ಅಭಿವೃದ್ಧಿಯನ್ನು ತಡೆ ಹಿಡಿಯಬೇಕೆಂದು ಸಿಬಿಐಗೆ ಸುಪಾರಿ ನೀಡಲಾಗಿದೆ ಎಂದು ಅಹಮದಾಬಾದ್ ಮಹಾನಗರ ಪಾಲಿಕೆಯ ಕಾರ್ಯಕ್ರಮವೊಂದರಲ್ಲಿ ಮೋದಿ ದೂಷಿಸಿದರು.
ಗುಜರಾತ್ ಜನತೆ ಇದಕ್ಕೆ ಸಮರ್ಥ ಉತ್ತರ ನೀಡಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ. ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯ ಅಡಿಯಲ್ಲಿ ತೇಲಾಡುತ್ತಿರುವ ಕಾಂಗ್ರೆಸ್‌ಗೆ ಯೋಗ್ಯವಾದ ಪ್ರತಿಕ್ರಿಯೆ ನಮ್ಮ ಜನರಿಂದ ದೊರೆಯಲಿದೆ ಎಂದರು.
ಸಿಬಿಐ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಿಗೆ ಗುಜರಾತ್ ಜನತೆ ಈ ಬಾರಿಯೂ ಪ್ರತ್ಯುತ್ತರ ನೀಡಲಿದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ರಾಜ್ಯದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಜನಸಾಮಾನ್ಯರು ಶಾಂತಿ ಮತ್ತು ಭದ್ರತೆಯನ್ನು ಬಯಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಇಲ್ಲಿ ಶಾಂತಿ ನೆಲೆಸಿದೆ. ಇದಕ್ಕೆ ಕಾರಣ ರಾಜ್ಯದ ಜನತೆ ಮತ್ತು ಪೊಲೀಸರು ಎಂದು ಮೋದಿ ಜನಬೆಂಬಲ ಗಿಟ್ಟಿಸಿಕೊಳ್ಳಲು ಯತ್ನಿಸಿದರು.
ಗುಜರಾತಿನಲ್ಲಿ ಶಾಂತಿ ಕದಡಲು ಕಾಂಗ್ರೆಸ್ ಬಯಸುತ್ತಿದೆ ಎಂಬುದನ್ನು ಪರೋಕ್ಷವಾಗಿ ಆರೋಪಿಸಿದ ಮೋದಿ, ರಾಜ್ಯದಲ್ಲಿ ಶಾಂತಿಯ ಕಾರಣದಿಂದಲೇ ನಮ್ಮಿಂದ ಇಷ್ಟೊಂದು ಸಾಧನೆ ಮಾಡುವುದು ಸಾಧ್ಯವಾಗಿದೆ; ಆದರೆ ಇದನ್ನು ಕೆಲವು ದುಷ್ಟಶಕ್ತಿಗಳು ಬುಡಮೇಲು ಮಾಡಲು ಯತ್ನಿಸುತ್ತಿವೆ ಎಂದರು.
ಅದೇ ಹೊತ್ತಿಗೆ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಕೂಡ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ. ಆದರೆ ನಮ್ಮ ದೆಹಲಿಯಲ್ಲಿನ ಆಡಳಿತಗಾರರಿಗೆ ಇದರ ತಲೆ ಬಿಸಿಯೇ ಇಲ್ಲ ಎಂದರು.