ಮುಂದಿನ ಮಹಾಚುನಾವಣೆಯ ನಂತರ ಪ್ರಧಾನ ಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ರಾಹುಲ್ ಗಾಂಧಿಯವರ ರಾಜಕೀಯ ಮೈಲೇಜ್ ಯಾತ್ರೆಯೀಗ ಗಣಿಗಾರಿಕೆ ವಿವಾದದಿಂದ ನಲುಗುತ್ತಿರುವ ಒರಿಸ್ಸಾ ತಲುಪಿದೆ.
ಕೇಂದ್ರ ಸರಕಾರದಿಂದ ವೇದಾಂತ ರಿಸೋರ್ಸಸ್ ಕಂಪನಿಗೆ ಬಾಕ್ಸೈಟ್ ಗಣಿಗಾರಿಕೆ ಅನುಮತಿ ತಿರಸ್ಕರಿಸಲ್ಪಟ್ಟ ಎರಡು ದಿನಗಳ ನಂತರ ವಿವಾದಿತ ಕಲಹಂಡಿ ಜಿಲ್ಲೆಯ ನಿಯಮಗಿರಿ ಹಿಲ್ಸ್ ಪ್ರದೇಶಕ್ಕೆ ಕಾಂಗ್ರೆಸ್ ಯುವ ನಾಯಕ ಭೇಟಿ ನೀಡುತ್ತಿದ್ದಾರೆ.
ರಾಹುಲ್ ಗಾಂಧಿಯವರು ಇಂದು ಸಂಜೆ ಇಲ್ಲಿನ ಬುಡಕಟ್ಟು ಪ್ರದೇಶದ ಜನರ ಜತೆ ಮಾತುಕತೆ ನಡೆಸಲಿದ್ದಾರೆ. ನಂತರ ಅವರು ಸಾರ್ವಜನಿಕ ಸಭೆಯೊಂದರಲ್ಲೂ ಪಾಲ್ಗೊಳ್ಳುತ್ತಾರೆ. ಬುಡಕಟ್ಟು ಯುವಜನತೆಯನ್ನು ಮಾವೋವಾದಿಗಳಿಂದ ದೂರ ಇಡುವುದೇ ಅವರ ಉದ್ದೇಶ ಎಂದು ಒರಿಸ್ಸಾ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ನವರಂಗಪುರ ಸಂಸದ ಪ್ರದೀಪ್ ಮಾಜ್ಹಿ ತಿಳಿಸಿದ್ದಾರೆ.
ರಾಹುಲ್ ಭೇಟಿಯಲ್ಲಿ ವೇದಾಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಲಾಭ ಪಡೆದುಕೊಳ್ಳುವ ಯಾವುದೇ ಪ್ರಯತ್ನವಿಲ್ಲ ಎಂದು ಒತ್ತಿ ಹೇಳಿರುವ ಪ್ರದೀದ್, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ತನ್ನ ರಾಜಕೀಯ ಜೀವನದ ಆರಂಭದಿಂದಲೂ ದುರ್ಬಲ ವರ್ಗದವರ ಪರವಾಗಿ ಹೋರಾಟ ನಡೆಸುತ್ತಾ ಬಂದವರು ಎಂದಿದ್ದಾರೆ.
ಡಂಗಾರಿಯಾ ಮತ್ತು ಕುಟಿಯಾ ಕಂಡ ಬುಡಕಟ್ಟು ಜನರ ತವರಾಗಿರುವ ನಿಯಮಗಿರಿ ಹಿಲ್ಸ್‌ನಲ್ಲಿ ಕೇಂದ್ರ ಪರಿಸರ ಸಚಿವಾಲಯವು ಎರಡನೇ ಹಂತದ ಪ್ರಸ್ತಾವಿತ ಯೋಜನೆಗೆ ವೇದಾಂತ ಗಣಿಗಾರಿಕಾ ಯೋಜನೆಗೆ ಅನುಮತಿ ನಿರಾಕರಿಸಿ ಹಿನ್ನಡೆ ಒದಗಿಸಿದ ನಂತರ ಹಿಂದುಳಿದ ವರ್ಗಗಳ ಪ್ರದೇಶವಾಗಿರುವ ಲಂಜೀಗಢಕ್ಕೆ ನೆಹರೂ-ಗಾಂಧಿ (?) ಕುಡಿ ಭೇಟಿ ನೀಡುತ್ತಿದ್ದಾರೆ.
ಇದೇ ಹೊತ್ತಿಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಕಾಂಗ್ರೆಸ್ ನಾಯಕ, ರಾಹುಲ್ 'ಆದಿವಾಸಿ ಅಧಿಕಾರ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಷ್ಟೇ ಬರುತ್ತಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಅವರು ಯುಪಿಎ ಸರಕಾರವನ್ನು ಸಮರ್ಥಿಸಿಕೊಳ್ಳುವ ಮಾತುಗಳನ್ನು ಆಡುವ ನಿರೀಕ್ಷೆಗಳಿವೆ. ಗಣಿಗಾರಿಕೆ ಸೇರಿದಂತೆ ಬುಡಕಟ್ಟು ಜನರಿಗೆ ತೊಂದರೆಯಾಗುವ ಯಾವುದೇ ಯೋಜನೆಗಳಿಗೆ ಸರಕಾರವು ಅನುಮತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಡಂಗಾರಿಯಾ ಮತ್ತು ಕುಟಿಯಾ ಕಂಡಾಸ್ ಮುಂತಾದ ಬುಡಕಟ್ಟು ಗುಂಪುಗಳ ಒಲವು ಗಿಟ್ಟಿಸಲು ಯತ್ನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಹುಲ್ ಭೇಟಿ ಸಂಪೂರ್ಣವಾಗಿ ರಾಜಕೀಯ ಉದ್ದೇಶವುಳ್ಳದ್ದು ಎಂದು ಒರಿಸ್ಸಾದ ಆಡಳಿತ ಪಕ್ಷ ಬಿಜು ಜನತಾ ದಳ ಪ್ರತಿಕ್ರಿಯಿಸಿದೆ. ಕೇಂದ್ರ ಸರಕಾರಕ್ಕೆ ಬುಡಕಟ್ಟು ಜನರ ಬಗ್ಗೆ ಯಾವುದೇ ಚಿಂತೆಯಿಲ್ಲ, ಅವರು ತಮ್ಮ ಓಟ್ ಬ್ಯಾಂಕ್ ವಿಸ್ತರಿಸುವುದನ್ನಷ್ಟೇ ಯೋಚಿಸುತ್ತಿದ್ದಾರೆ ಎಂದು ಯುವ ಬಿಜು ಜನತಾದಳ ಸಂಚಾಲಕ ಸಂಜಯ್ ದಾಸ್ ಬರ್ಮಾ ತಿಳಿಸಿದ್ದಾರೆ.