ಅಭಿವೃದ್ಧಿಯ ಹೆಸರಿನಲ್ಲಿ ಬುಡಕಟ್ಟು ಜನರ ಧ್ವನಿಯನ್ನು ಅಮುಕಲಾಗುತ್ತಿದೆ. ಆದರೆ ಅವರಿಗಾಗಿ ನಾನು ದೆಹಲಿಯಲ್ಲಿ ಹೋರಾಡುವ ಯೋಧನಾಗುತ್ತೇನೆ ಎಂದು ಹೇಳುವ ಮೂಲಕ ವೇದಾಂತ ಪ್ರಕರಣವನ್ನು ಕೆದಕಿ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಬುಡಕಟ್ಟು ಜನರ ಒಲವು ಗಿಟ್ಟಿಸಲು ಯತ್ನಿಸಿದ್ದಾರೆ.
ಒರಿಸ್ಸಾದ ಕಾಲಹಂದಿ ಜಿಲ್ಲೆಯ ನಿಯಮಗಿರಿ ಹಿಲ್ಸ್‌ನಲ್ಲಿ ಬುಡಕಟ್ಟು ಜನರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ನಿಯಮಗಿರಿಯನ್ನು ಉಳಿಸಿಕೊಳ್ಳಲು ಮಾತ್ರ ನಾವು ಹೋರಾಟ ಮಾಡುತ್ತಿದ್ದೇವೆ; ಗಣಿಗಾರಿಕೆಯ ಯೋಜನೆಯನ್ನು ತಿರಸ್ಕರಿಸಿದ ಕೂಡಲೇ ನಾವೇನೂ ಅಭಿವೃದ್ಧಿಯ ವಿರೋಧಿಗಳೆಂದು ಅಂದುಕೊಳ್ಳಬೇಕಿಲ್ಲ ಎಂದರು.
ಬುಡಕಟ್ಟು ಜನರು ನಿಯಮಗಿರಿ ಬೆಟ್ಟಗಳನ್ನು ದೇವರೆಂದು ಪರಿಗಣಿಸುತ್ತಾರೆ. ಹಾಗಾಗಿ ಅಲ್ಲಿ ಗಣಿಗಾರಿಕೆ ನಡೆಸುವುದೆಂದರೆ ದೇವರ ಮೇಲೆ ದಾಳಿ ನಡೆಸಿದಂತೆ ಎಂದು ಅವರು ಭಾವಿಸುತ್ತಾರೆ ಎಂದು ಭಾವನಾತ್ಮಕವಾಗಿ ತಟ್ಟಲು ನೆಹರೂ ಕುಟುಂಬದ ಕುಡಿಯಾಗಿರುವ ರಾಹುಲ್ ಯತ್ನಿಸಿದರು.
ಲಂಡನ್ ಮೂಲದ ವೇದಾಂತ ರಿಸೋರ್ಸಸ್ ಕಂಪನಿಯ ಬಾಕ್ಸೈಟ್ ಗಣಿಗಾರಿಕೆ ಯೋಜನೆಯನ್ನು ತಿರಸ್ಕರಿಸಿರುವ ಕೇಂದ್ರ ಪರಿಸರ ಸಚಿವಾಲಯದ ನಿರ್ಧಾರವನ್ನು ಪ್ರಶಂಸಿಸಿರುವ ರಾಹುಲ್, ಇದು ಇಲ್ಲಿ ನೆಲೆಸಿರುವ ಜನತೆಗೆ ಲಭಿಸಿರುವ ಜಯ ಎಂದು ಬಣ್ಣಿಸಿದರು.
ರಾಹುಲ್‌ಗೆ ವರ್ಚಸ್ಸಿಲ್ಲ: ಬಿಜೆಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಸಮಾಜದ ಎಲ್ಲಾ ವರ್ಗದ ಜನತೆಯನ್ನು ಮುಟ್ಟುವ ವರ್ಚಸ್ಸಿಲ್ಲ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಸಮಾಜದಲ್ಲಿನ ಎಲ್ಲಾ ಸಮುದಾಯಗಳ ಜನತೆಯನ್ನು ತಲುಪುವ ಆಕರ್ಷಕ ವ್ಯಕ್ತಿತ್ವವನ್ನು ರಾಹುಲ್ ಹೊಂದಿದ್ದಾರೆ ಎನ್ನುವ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಮಧ್ಯಪ್ರದೇಶದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಹುಲ್ ಮಾತ್ರ ಅಂತಹ ಮೋಹಕತೆ ಹೊಂದಿರುವುದು ನಿಜವಾಗಿದ್ದರೆ, ಅವರು ಪ್ರಚಾರ ಮಾಡಿದ್ದ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿರಲಿಲ್ಲ ಎಂದರು.
ಅದೇ ಹೊತ್ತಿಗೆ ರಾಹುಲ್ ಗಾಂದಿಯನ್ನು ಕಾಂಗ್ರೆಸ್ ಮುಂದಿನ ಪ್ರಧಾನಿ ಎಂದು ಬಿಂಬಿಸುತ್ತಾ ಬರುತ್ತಿರುವುದಕ್ಕೆ ಯಾವುದೇ ರೀತಿಯ ಆತಂಕವಿಲ್ಲ ಎಂದಿರುವ ಗಡ್ಕರಿ, ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ಯಾರನ್ನು ಪ್ರಧಾನಿಯನ್ನಾಗಿ ಬಿಂಬಿಸಬೇಕೆನ್ನುವುದು ಅವರಿಗೆ ಬಿಟ್ಟದ್ದು ಎಂದರು.