ಜಮ್ಮು-ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಲು ಯತ್ನಿಸುತ್ತಾ ಪಾಕಿಸ್ತಾನಕ್ಕೆ ಪರೋಕ್ಷ ಸಹಕಾರ ನೀಡುತ್ತಾ ಬಂದಿರುವ ಚೀನಾ ಮತ್ತೊಂದು ಆಟಕ್ಕೆ ಮುಂದಾಗಿ ಭಾರತದಿಂದ ಮುಖಭಂಗ ಅನುಭವಿಸಿದೆ.
ರಕ್ಷಣಾ ಮಾತುಕತೆಗಾಗಿ ಬೀಜಿಂಗ್‌ಗೆ ತೆರಳಬೇಕಿದ್ದ ಜಮ್ಮು-ಕಾಶ್ಮೀರದ ಮಿಲಿಟರಿ ಕಮಾಂಡರ್ ಒಬ್ಬರ ಕುರಿತು ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಭಾರತವು ಮಾತುಕತೆಯನ್ನೇ ರದ್ದುಪಡಿಸಿದೆ.
ಚೀನಾ ಮತ್ತು ಭಾರತಗಳ ನಡುವಿನ ರಕ್ಷಣಾ ವ್ಯವಸ್ಥೆಯ ಕುರಿತು ಸಾಮಾನ್ಯವಾಗಿ ನಡೆಯುವ ಉನ್ನತ ಮಟ್ಟದ ಮಾತುಕತೆಗೆ ದೇಶದ ಪರವಾಗಿ ತೆರಳಲು ನವದೆಹಲಿಯು ಜಮ್ಮು-ಕಾಶ್ಮೀರದ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ನಾರ್ತರ್ನ್ ಏರಿಯಾ ಕಮಾಂಡ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಅವರನ್ನು ಸೂಚಿಸಿತ್ತು.
ಮೊದಲಿನಿಂದಲೂ ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟಿರುವ ಚೀನಾವು ಇದರಿಂದ ಅಸಮಾಧಾನಗೊಂಡು, ಕಣಿವೆ ರಾಜ್ಯವು ವಿವಾದಿತ ಪ್ರದೇಶವಾಗಿರುವ ಕಾರಣ ಜಸ್ವಾಲ್ ಅವರನ್ನು ಸ್ವಾಗತಿಸಲು ತಾನು ಸಿದ್ಧನಿಲ್ಲ ಎಂದು ಪ್ರತಿಕ್ರಿಯಿಸಿತು.
ಚೀನಾದ ನಡೆಯಿಂದ ಕುಪಿತಗೊಂಡ ಭಾರತವು ರಾಜತಾಂತ್ರಿಕ ಮಾರ್ಗದ ಮೂಲಕ ತನ್ನ ಅಧಿಕೃತ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ಪೂರ್ವದ ನೆರೆರಾಜ್ಯದ ಜತೆಗಿನ ರಕ್ಷಣಾ ಸಂಬಂಧದ ಎಲ್ಲಾ ಮಾತುಕತೆಗಳನ್ನು ಈಗಿನ ಮಟ್ಟಿಗೆ ಅಮಾನತುಗೊಳಿಸಲು ನಿರ್ಧರಿಸಿದೆ.
ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಣಿಸಿಕೊಂಡಿದೆ. ಭಾರತದ ರಾಷ್ಟ್ರೀಯ ರಕ್ಷಣಾ ಕಾಲೇಜಿಗೆ ಬರಬೇಕಿದ್ದ ಇಬ್ಬರು ಚೀನಾದ ರಕ್ಷಣಾ ಅಧಿಕಾರಿಗಳ ಭೇಟಿಗೂ ನವದೆಹಲಿ ಅವಕಾಶ ನಿರಾಕರಿಸಿದೆ. ಅಲ್ಲದೆ ಭಾರತೀಯ ಮಿಲಿಟರಿ ಅಧಿಕಾರಿಗಳ ಚೀನಾವ ಪ್ರವಾಸವನ್ನೂ ರದ್ದುಗೊಳಿಸಲಾಗಿದೆ.
ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯವು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಚೀನಾ ರಾಜಕೀಯವೇನು? ಮೊದಲಿನಿಂದಲೂ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಗಳ ಕುರಿತು ಪಕ್ಕದ ಕಮ್ಯೂನಿಸ್ಟ್ ರಾಷ್ಟ್ರ ರಾಜಕೀಯ ಮಾಡುತ್ತಲೇ ಬಂದಿದೆ.
ಜಮ್ಮು-ಕಾಶ್ಮೀರದ ಜನತೆಗೆ ಭಾರತದ ಪಾಸ್‌ಪೋರ್ಟ್‌ನಲ್ಲಿ ವೀಸಾವನ್ನು ಮುದ್ರಿಸಲು ನಿರಾಕರಿಸುವ ಮೂಲಕ ತನ್ನ ಕುತಂತ್ರವನ್ನು ಪ್ರದರ್ಶಿಸುತ್ತಿರುವ ಚೀನಾ, ಇದರ ವಿರುದ್ಧದ ನವದೆಹಲಿಯ ಪ್ರತಿಭಟನೆಯನ್ನೂ ಲೆಕ್ಕಿಸುತ್ತಿಲ್ಲ. ಭಾರತದ ಪಾಸ್‌ಪೋರ್ಟ್‌ನಲ್ಲಿ ವೀಸಾವನ್ನು ಅಂಟಿಸುವ ಬದಲು, ಪ್ರತ್ಯೇಕವಾಗಿ ಚೀನಾ ನೀಡುವ ವೀಸಾವನ್ನು ಭಾರತವು ಪರಿಗಣಿಸುವುದಿಲ್ಲವಾದ್ದರಿಂದ, ಜಮ್ಮು-ಕಾಶ್ಮೀರದ ಜನತೆ ಚೀನಾ ಭೇಟಿಯಿಂದ ವಂಚಿತರಾಗುತ್ತಿದ್ದಾರೆ.
ಇದೇ ರೀತಿ ಅರುಣಾಚಲ ಪ್ರದೇಶಕ್ಕೂ ಆಗುತ್ತಿದೆ. ಅರುಣಾಚಲ ಪ್ರದೇಶ ರಾಜ್ಯವು ತನ್ನದೇ ಭೂಪ್ರದೇಶವಾಗಿರುವುದರಿಂದ, ನಮ್ಮ ಪ್ರಜೆಗಳಿಗೆ ಪಾಸ್‌ಪೋರ್ಟ್-ವೀಸಾ ಬೇಕಾಗಿಲ್ಲ ಎನ್ನುವುದು ಪಕ್ಕದ ರಾಜ್ಯದ ವಾದ!