ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೊಲೀಸರಿಗೆ ಹೆಚ್ಚಿನ ಅಧಿಕಾರ ಅಪಾಯಕಾರಿ: ಸಂಸದರು (Excessive powers to police | Rajya Sabha | Congress | BJP)
Bookmark and Share Feedback Print
 
ಅಪರಾಧ ದಂಡ ಸಂಹಿತೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪೊಲೀಸರಿಗೆ ನೀಡಲಾಗುತ್ತಿರುವ 'ಅಪಾಯಕಾರಿ ಅಧಿಕಾರ'ಗಳ ಕುರಿತು ಆಡಳಿತ ಪಕ್ಷ ಕಾಂಗ್ರೆಸ್ ಸೇರಿದಂತೆ ರಾಜ್ಯಸಭೆಯ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನೂತನ ನಿಯಮವು ಪೊಲೀಸರಿಗೆ ಮಿತಿ ಮೀರಿದ ಮತ್ತು ನಿರಂಕುಶ ಅಧಿಕಾರವನ್ನು ನೀಡುತ್ತದೆ ಎಂದು ಮಸೂದೆಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಭಿನ್ನ ಪಕ್ಷಗಳ ಸದಸ್ಯರು ಅಭಿಪ್ರಾಯಪಟ್ಟರು.

ಏಳು ವರ್ಷಗಳ ಗರಿಷ್ಠ ಕಾರಾಗೃಹ ಶಿಕ್ಷೆಗೊಳಪಡಬಹುದಾದ ಗ್ರಾಹ್ಯ ಅಪರಾಧವನ್ನು ಎಸಗಿದ ಸಂದರ್ಭದಲ್ಲಿ ಸಂಬಂಧಪಟ್ಟವರನ್ನು ಬಂಧಿಸುವ ಅಥವಾ ಬಂಧಿಸದೇ ಇರುವ ಕಾರಣಗಳನ್ನು ದಾಖಲಿಸಬೇಕು ಎಂಬುದನ್ನು ಕಡ್ಡಾಯವಾಗಿಸುವುದನ್ನು ಅಪರಾಧ ದಂಡ ಸಂಹಿತೆ (ತಿದ್ದುಪಡಿ) ಕಾಯ್ದೆ 2010 ಒಳಗೊಂಡಿದೆ.

ಈ ಮಸೂದೆಯನ್ನು ಲೋಕಸಭೆ ಈಗಾಗಲೇ ಅಂಗೀಕರಿಸಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಇ.ಎಂ. ಸುದರ್ಶನ ನಾಚಿಪ್ಪನ್, ಪೊಲೀಸರಿಗೆ ನೀಡುತ್ತಿರುವ ಅಧಿಕಾರಗಳು ತೀರಾ ಅಪಾಯಕಾರಿ ಎಂಬ ಭಾವನೆ ನನ್ನದು ಎಂದರು.

ಪ್ರಸ್ತಾವಿತ ಮಸೂದೆಯಲ್ಲಿನ ಅಧಿನಿಯಮವು ಪೊಲೀಸರಿಗೆ ಚೌಕಾಶಿ ನಡೆಸುವ ಅಥವಾ ಒಪ್ಪಂದಕ್ಕೆ ಬರುವ ಅವಕಾಶಗಳನ್ನು ಒದಗಿಸಬಹುದು ಎಂದೂ ಅವರು ಭೀತಿ ವ್ಯಕ್ತಪಡಿಸಿದ್ದಾರೆ.

ಖ್ಯಾತ ವಕೀಲರೂ ಆಗಿರುವ ನಾಚಿಪ್ಪನ್, ಪ್ರಜೆಗಳು ಮೌನವಾಗಿರುವ ಹಕ್ಕನ್ನು ಸಂವಿಧಾನವು ನೀಡಿದೆ; ಇದನ್ನು ರಕ್ಷಿಸಬೇಕಾಗಿತ್ತು. ಆದರೆ ಈ ಕಾಯ್ದೆಯ ಮುಖಾಂತರ ಪೊಲೀಸರು ಆ ಹಕ್ಕನ್ನು ಕಸಿದುಕೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್ ಸದಸ್ಯರ ವಾದವನ್ನು ಒಪ್ಪಿದ ಸಿಪಿಐಎಂನ ಕೆ.ಎನ್. ಬಾಲಗೋಪಾಲ್ ಕೂಡ ಪ್ರಸ್ತಾವಿತ ತಿದ್ದುಪಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದೀಗ ತಿದ್ದುಪಡಿ ತರಲು ಉದ್ದೇಶಿರುವುದು ತಾಂತ್ರಿಕವಾಗಿ ಸರಿ, ಆದರೆ ಇದು ಪ್ರಯೋಗಾಲಯದಲ್ಲಿ ಮಾತ್ರ ಸಾಧ್ಯವೇ ಹೊರತು ವಾಸ್ತವದಲ್ಲಿ ಸಾಧ್ಯವಿಲ್ಲ. ಒಟ್ಟಾರೆ ಇದರಿಂದ ಪೊಲೀಸರಿಗೆ ನಿರಂಕುಶ ಅಧಿಕಾರವನ್ನಷ್ಟೇ ನೀಡಿದಂತಾಗುತ್ತದೆ ಎಂದರು.

ಇದಕ್ಕೆ ಬಿಜೆಪಿಯ ಅವಿನಾಶ್ ರೈ ಖನ್ನಾ ಅವರೂ ದನಿಗೂಡಿಸಿದರು. ಮಸೂದೆಗೆ ತರುತ್ತಿರುವ ತಿದ್ದುಪಡಿಯ ಉದ್ದೇಶವೇನೂ ಉತ್ತಮವಾಗಿದೆ. ಆದರೆ ವಾಸ್ತವಿಕ ದೋಷಗಳಿಂದಾಗಿ ಅಧಿಕಾರವನ್ನು ಪೊಲೀಸರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು ಎಂದರು.

ಬಹುಜನ ಸಮಾಜ ಪಕ್ಷದ ನರೇಂದ್ರ ಕುಮಾರ್ ಕಶ್ಯಪ್ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ