ಬಹುಚರ್ಚಿತ ವಿಷಯವಾಗಿರುವ ಸಂಸದರ ವೇತನ ಹೆಚ್ಚಳ ಮಸೂದೆಗೆ ಲೋಕಸಭೆಯಲ್ಲಿ ಇಂದು ಅಧಿಕೃತ ಮುದ್ರೆಯನ್ನೊತ್ತಲಾಗಿದೆ. ವೇತನವನ್ನು 16,000ದಿಂದ 50,000 ರೂಪಾಯಿಗಳಿಗೆ ಮೂರು ಪಟ್ಟು ಹೆಚ್ಚಳ ಹಾಗೂ ಪ್ರಮುಖ ಭತ್ಯೆಗಳನ್ನು 40,000 ರೂಪಾಯಿಗಳಿಗೆ ಏರಿಕೆ ಮಾಡುವ ಮಸೂದೆಯನ್ನು ಅಂಗೀಕರಿಸಲಾಯಿತು.
'ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿಗಳ (ತಿದ್ದುಪಡಿ) ಮಸೂದೆ, 2010'ಯ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧರಿಸಲು ಸ್ವತಂತ್ರ ಸಂಸ್ಥೆಯೊಂದನ್ನು ಅಸ್ತಿತ್ವಕ್ಕೆ ತರಬೇಕು ಎಂಬ ಪ್ರಬಲ ಬೇಡಿಕೆ ಸಂಸದರಿಂದ ಬಂತು.
ಮಸೂದೆಯ ಕುರಿತ ಚರ್ಚೆಯಲ್ಲಿ ಸುಮಾರು 10 ಮಂದಿ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಸ್ವತಂತ್ರ ಸಂಸ್ಥೆಯೊಂದರ ಕುರಿತು ಬೇಡಿಕೆ ಮುಂದಿಟ್ಟಾಗ ಇತರ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿದರು.
ಚರ್ಚೆಗೆ ಉತ್ತರಿಸುತ್ತಿದ್ದ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರ ವೇತನ ಮತ್ತು ಪಿಂಚಣಿಗಳನ್ನು ಪರಿಷ್ಕರಣೆ ಮಾಡಲು ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತರುವ ಅಗತ್ಯವಿದೆ ಎಂದರು.
ಪಿಂಚಣಿಯನ್ನು 25,000 ರೂಪಾಯಿಗಳಿಗೆ ಏರಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಭನ್ಸಾಲ್, ಪಿಂಚಣಿಯು ಸ್ಥಿರವಲ್ಲ; ಅದು ಸದಸ್ಯನೊಬ್ಬನ ಅಧಿಕಾರವಧಿಯನ್ನು ಆಧರಿಸಿ ಹೆಚ್ಚುತ್ತಾ ಹೋಗುತ್ತದೆ ಎಂದರು. ಇದಕ್ಕೆ ಶರದ್ ಯಾದವ್ ಅವರನ್ನು ಉದಾಹರಿಸಿದ ಸಚಿವರು, ಜೆಡಿಯು ಮುಖ್ಯಸ್ಥ ತಾನು ಸಂಸದನಾಗಿ ಪಡೆಯುವುದಕ್ಕಿಂತ ಹೆಚ್ಚು ಪಿಂಚಣಿಯನ್ನು ಪಡೆಯುತ್ತಾರೆ ಎಂದರು.
ಅದೇ ಹೊತ್ತಿಗೆ ಸಂಸದರ ವೇತನ ಹೆಚ್ಚಳ ಕುರಿತು ನಡೆಯುತ್ತಿರುವ ಬಹಿರಂಗ ಚರ್ಚೆಗಳು ಮಾದರಿಯಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿರುವ ಅಡ್ವಾಣಿಯವರು, ಈ ಸಂಬಂಧ ಪರಿಷ್ಕರಣೆಗಾಗಿ ಸಂಸ್ಥೆಯೊಂದು ಅಗತ್ಯ ಎಂಬುದನ್ನು ಒತ್ತಿ ಹೇಳಿದರು.