ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಬಿಗಿ ಪಟ್ಟನ್ನು ಸಡಿಲಿಸಿಲ್ಲ. ಪಾಕಿಸ್ತಾನ ಏನೇ ಮಾಡಿದರೂ, ಅದರ ಜೊತೆ ಸೌಹಾರ್ದಯುತ ಸಂಬಂಧದ ಮಾತುಕತೆಯನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಮೇಲೆ ಧಾಳಿ ನಡೆಸುವುದಾಗಿ ಪಾಕಿಸ್ತಾನದ ಕೆಲವು ಸಂಘಟನೆಗಳು ಹೇಳಿರುವ ಬೆನ್ನಲ್ಲೇ ಪ್ರಧಾನಿ ಸಿಂಗ್ ಈ ಮಾತು ಹೇಳಿದ್ದಾರೆ.
ಜೊತೆಗೆ, ಈ ಹಿಂದೆ ಭಾರತೀಯ ರಾಯಬಾರಿ ಕಛೇರಿಯಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸುವ ಅಂಶಗಳು ಕೂಡಾ ಬಯಲಾಗಿತ್ತು.
ಪಾಕಿಸ್ತಾನ ಎಷ್ಟೇ ದುರ್ನಡತೆ ತೋರಿದರೂ, ಎಂತಹ ಬೆಟ್ಟದಂಥ ಸಮಸ್ಯೆಗಳು ಬಂದರೂ ಉಭಯ ದೇಶಗಳ ನಡುವೆ ಸಾಮರಸ್ಯ ವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಭಾರತ ನಡೆಸುತ್ತಿರುವ ಮಾತುಕತೆ ಮುಂದುವರಿಯಲಿದೆ ಎಂದು ಸಿಂಗ್ ಹೇಳಿದರು.
ಈ ಹಿಂದೆ ಪಾಕಿಸ್ತಾನದಲ್ಲಿ ನಡೆಸಲಾದ ಭಾರತದ ಮಾತುಕತೆಯೂ ಕೂಡಾ ವಿಫಲವಾಗಿತ್ತು. ಹಾಗೂ ಪಾಕಿಸ್ತಾನ ಭಾರತಕ್ಕೆ ಅವಮಾನಿಸುವ ನುಡಿಗಳನ್ನು ಮಾಧ್ಯಮಗಳಲ್ಲಿ ಹೇಳಿತ್ತು. ಜೊತೆಗೆ ಭಾರತಕ್ಕೆ ಮಾತುಕತೆಯ ಬಗ್ಗೆ ನಿಜವಾದ ಆಸಕ್ತಿಯಿಲ್ಲ ಎಂಬ ಹೇಳಿಕೆಯನ್ನೂ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.