ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟಿವಿ ಚಾನೆಲ್‌ಗಳ ಸುದ್ದಿಯ ಅಬ್ಬರಕ್ಕೆ ಯುವಕನ ಆತ್ಮಾಹುತಿ! (Gujarat | Kamlesh Raval | Mayur Raval | Kalpesh Mistry)
Bookmark and Share Feedback Print
 
PR
ಟಿವಿ ಚಾನೆಲ್‌ಗಳು ತಮ್ಮ ಟಿಆರ್‌ಪಿ ರೇಟಿಂಗ್‌ಗಾಗಿ ದೇಶದ ಹಿತವನ್ನೇ ಬಲಿಕೊಟ್ಟದ್ದನ್ನು 2008ರ ಮುಂಬೈ ದಾಳಿಯಲ್ಲಿ ಎಲ್ಲರೂ ನೋಡಿದ್ದಾಗಿದೆ. ಇದೀಗ ಅದೇ ನಿಟ್ಟಿನಲ್ಲಿ ಮುಂದುವರಿದಿರುವ ಎರಡು ಟಿವಿ ಚಾನೆಲ್‌ಗಳ ವರದಿಗಾರರು, ಓರ್ವ ವ್ಯಕ್ತಿಯನ್ನು ಕ್ಯಾಮರಾ ಎದುರು ಬೆಂಕಿ ಹಚ್ಚಿಕೊಳ್ಳುವಂತೆ ಪ್ರಚೋದನೆ ನೀಡಿ ಆತ ಸುಟ್ಟು ಹೋದ ನಂತರ ಭೂಗತರಾಗಿದ್ದಾರೆ.

ಹೈದರಾಬಾದ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕದಲ್ಲಿನ 'ಜನಪ್ರಿಯ ಸುದ್ದಿವಾಹಿನಿ'ಯ ಗುಜರಾತಿ ಭಾಷೆಯ ಚಾನೆಲ್ ಮತ್ತು ಜಿಟಿಪಿಎಲ್ ಎಂಬ ಗುಜರಾತಿ ಕೇಬಲ್ ಸುದ್ದಿವಾಹಿನಿಯ ಕಮಲೇಶ್ ರಾವಲ್ ಮತ್ತು ಮಯೂರ್ ರಾವಲ್ ಎಂಬವರೇ ಈ ಕೀಚಕ ಪತ್ರಕರ್ತರು. ಘಟನೆ ನಡೆಯುತ್ತಿದ್ದಂತೆ ಇಬ್ಬರೂ ನಾಪತ್ತೆಯಾಗಿದ್ದಾರೆ.

ಪತ್ರಕರ್ತರ ಹುಚ್ಚಾಟಕ್ಕೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಯುವಕನನ್ನು 29ರ ಹರೆಯದ ಕಲ್ಪೇಶ್ ಮೀಸ್ತ್ರಿ ಎಂದು ಗುರುತಿಸಲಾಗಿದೆ. ಕಲ್ಪೇಶ್ ಬೆಂಕಿ ಹಚ್ಚಿಕೊಳ್ಳುತ್ತಿರುವುದನ್ನು ತಡೆಯುವ ಬದಲು ಪತ್ರಕರ್ತರು ಪ್ರಚೋದನೆ ನೀಡುತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಇದೀಗ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೂರ್ವನಿಯೋಜಿತ ಕೃತ್ಯವಿದು...
ಆತ್ಮಾರ್ಪಣೆ ಮಾಡಿಕೊಂಡ ಕಲ್ಪೇಶ್ ಮೀಸ್ತ್ರಿಯ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಮತ್ತಷ್ಟು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ.

ಅದರ ಪ್ರಕಾರ ಕಮಲೇಶ್ ಮತ್ತು ಮಯೂರ್ ಎಂಬಿಬ್ಬರು ಪತ್ರಕರ್ತರ ಜತೆ ಕಲ್ಪೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಹಲವಾರು ಬಾರಿ ಮಾತುಕತೆ ನಡೆಸಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಚಿತ್ರಿಸಿಕೊಳ್ಳುವ ಕಾರ್ಯಕ್ಕೆ ಈ ಇಬ್ಬರು ಪತ್ರಕರ್ತರು ಸಂಚು ರೂಪಿಸಿದ್ದರು. ಆ ಮೂಲಕ ಪರೋಕ್ಷವಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಲಾಗಿದೆ.
PR

ವರದಿಗಳ ಪ್ರಕಾರ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಉಂಜಾ ಎಂಬಲ್ಲಿನ ಪೊಲೀಸ್ ಠಾಣೆಯ ಎದುರು ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಕಲ್ಪೇಶ್ ಶೇ.90ರಷ್ಟು ಸುಟ್ಟ ಗಾಯಗೊಂಡ ನಂತರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ನಂತರ ಸಾವನ್ನಪ್ಪಿದ್ದಾನೆ.

ಇದೆಲ್ಲ ನಾಟಕ ಎಂದಿದ್ದರು...
ಕಲ್ಪೇಶ್ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಿದ್ದಾಗ 'ಉತ್ತಮ ಸಮಾಜಕ್ಕಾಗಿನ' ಪತ್ರಕರ್ತನೂ ಸೇರಿದಂತೆ ಇಬ್ಬರು ಅದನ್ನು ತನ್ಮಯತೆಯಿಂದ ಚಿತ್ರೀಕರಿಸಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಟೀ ಮಾರಾಟಗಾರನೊಬ್ಬ ಸ್ಥಳಕ್ಕೆ ಧಾವಿಸಿದಾಗ, ಆತನನ್ನು ತಡೆದಿದ್ದ ಪತ್ರಕರ್ತರು 'ಇದೆಲ್ಲ ನಾಟಕ, ನೀನೇನು ಚಿಂತೆ ಮಾಡಬೇಡ. ಹೋಗು' ಎಂದಿದ್ದರು ಎಂದು ಪೊಲೀಸರಿಗೆ ವಿವರಣೆ ನೀಡಿದ್ದಾನೆ.

ಆರಂಭದಲ್ಲಿ ಸ್ವಲ್ಪ ಹೊತ್ತು ನಾವು ಚಿತ್ರೀಕರಣ ನಡೆಸಿ, ನಂತರ ಆತನನ್ನು ರಕ್ಷಿಸುತ್ತೇವೆ ಎಂದು ಪತ್ರಕರ್ತರು ನನಗೆ ಹೇಳಿದರು ಎಂದು ಟೀವಾಲಾ ಹೇಳಿಕೊಂಡಿದ್ದಾನೆ.

ಪರಿಸ್ಥಿತಿ ಕೈ ಮೀರಿತ್ತು...
ಕಲ್ಪೇಶ್‌ಗೆ ಪೊಲೀಸರಿಂದ ಅನ್ಯಾಯವಾಗಿತ್ತು. ಇದನ್ನು ಪತ್ರಕರ್ತರಲ್ಲಿ ಹೇಳಿಕೊಂಡಿದ್ದ. ಅದರಂತೆ ಆತ್ಮಹತ್ಯಾ ಯತ್ನದ ನಾಟಕವನ್ನು ರೂಪಿಸಲಾಗಿತ್ತು.

ಅನ್ಯಾಯಕ್ಕೊಳಗಾದ ಪೊಲೀಸ್ ಠಾಣೆಯ ಎದುರು ನೀನು ಆತ್ಮಹತ್ಯೆಗೆ ಯತ್ನಿಸುವುದನ್ನು ನಾವು ಚಿತ್ರೀಕರಿಸಿ, ನಮ್ಮ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತೇವೆ. ಆ ಮೂಲಕ ನಿನಗೆ ನ್ಯಾಯ ಒದಗಿಸುತ್ತೇವೆ ಎಂದು ಟಿಆರ್‌ಪಿ ರೇಟಿಂಗ್ ಗಮನದಲ್ಲಿಟ್ಟುಕೊಂಡು ಪತ್ರಕರ್ತರು ಬಲಿಪಶುವಿಗೆ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ.

ಆದರೆ ನಂತರ ನಡೆದದ್ದೇ ಬೇರೆ. ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಕಲ್ಪೇಶ್‌ನ ದೇಹಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಿಯಂತ್ರಿಸಲು ಇಬ್ಬರಿಗೂ ಸಾಧ್ಯವಾಗಲಿಲ್ಲ. ಆತ್ಮಹತ್ಯೆಗಾಗಿ ಸೀಮೆಎಣ್ಣೆಯನ್ನು ಆತ ಸುರಿದುಕೊಂಡಿದ್ದ. ರಕ್ಷಿಸುವ ಭರವಸೆ ನೀಡಿದ್ದ ಪತ್ರಕರ್ತರು ಕೊನೆಗೆ ಅಸಹಾಯಕರಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ