ಕಾಂಗ್ರೆಸ್ ಹೈಕಮಾಂಡ್ ಆದೇಶಗಳನ್ನು ಉಲ್ಲಂಘಿಸಿ, ಯಾತ್ರೆಯನ್ನು ಹಮ್ಮಿಕೊಂಡಿರುವ ಸಂಸದ ವೈ.ಎಸ್.ಜಗನ್ಮೋಹನ್ ರೆಡ್ಡಿಯವರಿಂದ ರಾಜ್ಯ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಿಲ್ಲವೆಂದು ಕೇಂದ್ರ ಕನೂನು ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತನ್ನ ಆಂತರಿಕ ವ್ಯವಹಾರಗಳನ್ನು ನಿಭಾಯಿಸುವಷ್ಟು ಸಾಮರ್ಥ್ಯವಿದೆ. ಇತರ ಪಕ್ಷಗಳಿಂದ ಸಲಹೆ ಪಡೆಯಬೇಕಾಗಿಲ್ಲ ಎಂದು ಮೊಯಿಲಿ ವ್ಯಂಗವಾಡಿದ್ದಾರೆ.
ಕಾಂಗ್ರೆಸ್ ಸಂಸದ ವೈ.ಎಸ್. ಜಗನ್ಮೋಹನ್ ಹಮ್ಮಿಕೊಂಡಿರುವ ಸಾಂತ್ವನ ಯಾತ್ರೆ, ಪಕ್ಷದ ಆಂತರಿಕ ವಿಷಯವಾಗಿದ್ದು, ಪಕ್ಷದ ಹೈಕಮಾಂಡ್ ನಿಭಾಯಿಸುವಷ್ಟು ಶಕ್ತಿ ಹೊಂದಿದೆ. ಕೆ.ರೋಸಯ್ಯ ನೇತೃತ್ವದ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆಂಧ್ರಪ್ರದೇಶದ ಉಸ್ತುವಾರಿಯನ್ನು ಹೊತ್ತಿರುವ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಸೆಪ್ಟೆಂಬರ್ 2ರೊಳಗೆ ಬಹಿರಂಗಪಡಿಸುವಂತೆ ಜಗನ್ ಗಡುವು ನೀಡಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮೊಯಿಲಿ, ಯಾತ್ರೆಯನ್ನು ಮುಂದುವರಿಸಿದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲು ಹೈಕಮಾಂಡ್‌ಗೆ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.