ಮಾವೋವಾದಿಗಳ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅಲ್ಪ ಯಶಸ್ವಿಯಾಗಿರುವ ಕೇಂದ್ರ ಸರಕಾರ, ಇದೀಗ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗತಿಯಾಗುವ ನಕ್ಸಲೀಯರಿಗೆ ಆಕರ್ಷಕ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಮಾವೋ ಪ್ರಭಾವಿತ ರಾಜ್ಯಗಳಲ್ಲಿರುವ ಮಾವೋವಾದಿಗಳು ಸರಕಾರಕ್ಕೆ ಶಶ್ತ್ರಾಸ್ತ್ರ ಸಮೇತ ಶರಣಾದಲ್ಲಿ, ಪ್ಯಾಕೇಜ್ ಸೇರಿದಂತೆ ಸುಮಾರು 2ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಭತ್ತೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾಗುವ ನಕ್ಸಲೀಯರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ 1.5 ಲಕ್ಷ ರೂಪಾಯಿಗಳನ್ನು ಠೇವಣಿಯಾಗಿಡಲಾಗುವುದು. ಮೂರು ವರ್ಷಗಳ ನಂತರ ತಮ್ಮ ಹಣವನ್ನು ಬಡ್ಡಿಸಮೇತ ಪಡೆಯಬಹುದಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಕೇಂದ್ರ ಸರಕಾರದ ಘೋಷಣೆಯಿಂದಾಗಿ, ಹಲವಾರು ನಕ್ಸಲೀಯರು ಹಿಂಸಾಮಾರ್ಗವನ್ನು ತ್ಯಜಿಸಿ ಶರಣಾಗಲು ಬಯಸಿದ್ದಾರೆ. ಶರಣಾಗುವ ನಕ್ಸಲೀಯರಿಗೆ ಪುನರ್‌ವಸತಿ ಕಲ್ಪಿಸಲು ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.