ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೊರಗೆ ಬಹದ್ದೂರ್ ಗಂಡು, ಒಳಗೆ ರಾಣಿ ಮಹಾರಾಣಿ..!? (Kollam | Kerala | Rani | Sreekanth)
Bookmark and Share Feedback Print
 
29ರ ಹರೆಯದ ಯುವತಿಯೊಬ್ಬಳು ತಾನು ಯುವಕನೆಂದು ನಂಬಿಸಿ ಕೆಲಸ ಗಿಟ್ಟಿಸಿಕೊಂಡು, ಬಾಸ್, ಸಹೋದ್ಯೋಗಿಗಳು ಸೇರಿದಂತೆ ಹಲವರನ್ನು ಏಮಾರಿಸಿ ಸಿಕ್ಕಿಬಿದ್ದಿದ್ದಾಳೆ. ಆಕೆಯ ಬಂಡವಾಳ ಬಯಲಾಗಿರುವುದು ಕಂಪನಿಗೆ ಮೋಸ ಮಾಡಿದ ನಂತರ.

ಕೇರಳದ ಕೊಲ್ಲಂನಲ್ಲಿ ಈ ಅಪರೂಪದ ಪ್ರಸಂಗ ನಡೆದಿದೆ. ಮೂಲತಃ ರಾಣಿ ಎಂಬ ಹೆಸರಿನ ಯುವತಿ ಶ್ರೀಕಾಂತ್ ಎಂಬ ಹೆಸರಿನಲ್ಲಿ ಗಂಡಿನಂತೆ ವೇಷ ಹಾಕಿ ಮಾರ್ಬಲ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಕೆಲಸ ಗಿಟ್ಟಿಸಿಕೊಂಡಿದ್ದಳು.
PR

ತೀರಾ ಬಡ ಕುಟುಂಬದಿಂದ ಬಂದಿದ್ದ ರಾಣಿ ಹಲವಾರು ಸಮಯ ನಿರುದ್ಯೋಗಿಯಾಗಿದ್ದಳು. ಕೊನೆಗೆ ಆಕೆ ಆರಿಸಿಕೊಂಡದ್ದು ಗಂಡಿನ ವೇಷ ತೊಟ್ಟು ಕೆಲಸಕ್ಕಿಳಿಯುವ ಮಾರ್ಗ. ಹಾಗೆ ಮಾಡಿದಲ್ಲಿ ಹೆಚ್ಚು ಸಂಬಳ ಸಿಗುವ ಕೆಲಸ ಸಿಗಬಹುದು ಮತ್ತು ತನ್ನ ಕನಸಿನ ಐಷಾರಾಮಿ ಮನೆ ಕಟ್ಟಿಸಬಹುದು ಎಂಬುದು ಆಕೆಯ ಯೋಚನೆಯಾಗಿತ್ತು.

ತಾನು ಜನ್ಮತಃ ಹೆಣ್ಣಾಗಿದ್ದರೂ, ತನ್ನ ವಿದ್ಯಾಭ್ಯಾಸದ ಪ್ರಮಾಣ ಪತ್ರಗಳನ್ನು ನಕಲು ಮಾಡಿ 'ಶ್ರೀಕಾಂತ್' ಎಂದು ಬದಲಾಯಿಸಿಕೊಂಡದ್ದಳು. ಐಡಿ ಕಾರ್ಡಲ್ಲಿ ಕೂಡ ಶ್ರೀಕಾಂತ್ ಹೆಸರು ಬರುವಂತೆ ನೋಡಿಕೊಂಡಿದ್ದಳು.

ಬಳಿಕ ಮೈಗೆ ಅಂಟಿಕೊಳ್ಳದ ಪ್ಯಾಂಟ್-ಶರ್ಟ್ ತೊಟ್ಟು, ತಲೆಗೂದಲನ್ನು ನೀಟಾಗಿ ಕ್ರಾಪ್ ಕಟ್ ಮಾಡಿಸಿಕೊಂಡು, ಕ್ಲೀನ್ ಶೇವ್ ಮಾಡಿಕೊಂಡ ರೀತಿಯಲ್ಲಿ 'ಸ್ಫುರದ್ರೂಪಿ ಯುವಕ'ನಂತೆ 'ಶ್ರೀಕಾಂತ್' ಆಗಿ ಬದಲಾದ ರಾಣಿ ಕೆಲಸಕ್ಕೆ ಸೇರಿದ್ದಳು.

ಐದು ತಿಂಗಳ ಹಿಂದಷ್ಟೇ ಮಾರ್ಬಲ್ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದ ಶ್ರೀಕಾಂತ್, ತನ್ನ ಪ್ರಾಮಾಣಿಕ ಕೆಲಸ ಮತ್ತು ಬುದ್ಧಿಮತ್ತೆಯ ಕಾರಣದಿಂದ ಎರಡೇ ತಿಂಗಳಲ್ಲಿ ಮ್ಯಾನೇಜರ್ ಹುದ್ದೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಳು.

ಸಿಗರೇಟು ಸೇದುತ್ತಿದ್ದಳು...
'ರಾಣಿ' ಕೇವಲ 'ಶ್ರೀಕಾಂತ್' ಆಗಿ ಬದಲಾದದ್ದು ಮಾತ್ರವಲ್ಲ, ಹುಡುಗರು ಏನೇನು ಮಾಡುತ್ತಾರೋ, ಅವುಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ತನ್ನನ್ನು ತಾನು ತೊಡಗಿಸಿಕೊಳ್ಳಲು ಯತ್ನಿಸಿದ್ದಳು.

ಶ್ರೀಕಾಂತ್‌ನನ್ನು ಸಹೋದ್ಯೋಗಿಗಳು ಕಣ್ಣನ್ ಎಂದೇ ಕರೆಯುತ್ತಿದ್ದರು. ಅವರೊಂದಿಗೆ ಬೈಕಿನಲ್ಲಿ ಓಡಾಡುವುದು, ಸಿಗರೇಟು ಸೇದುವುದು ಮಾತ್ರವಲ್ಲದೆ ಸಂಜೆ ಹೊತ್ತನ್ನು ಬಾರ್‌ಗಳಲ್ಲೂ ಕಳೆದಿದ್ದಳು.

ಇಷ್ಟೇ ಮಾಡಿದ್ದರೆ ಪ್ರಕರಣ ಬಯಲಾಗುತ್ತಲೇ ಇರಲಿಲ್ಲ. ಆದರೆ ಆಕೆ ಕಂಪನಿಗೆ ಮೋಸ ಮಾಡಿರುವ ವಿಚಾರ ಮಾಲೀಕನಿಗೆ ಗೊತ್ತಾಗುತ್ತಿದ್ದಂತೆ ಗ್ರಹಚಾರ ವಕ್ಕರಿಸಿತು. ಲೆಕ್ಕಾಚಾರದಲ್ಲಿ ಐದು ಲಕ್ಷ ರೂಪಾಯಿ ವ್ಯತ್ಯಾಸ ಕಂಡು ಬಂದಾಗ, ಎಲ್ಲಾ ಉದ್ಯೋಗಿಗಳನ್ನೂ ಪೊಲೀಸ್ ತನಿಖೆಗೊಳಪಡಿಸುವ ನಿರ್ಧಾರಕ್ಕೆ ಕಂಪನಿಯ ಮಾಲೀಕರು ಬಂದಿದ್ದರು.

ಉಳಿದೆಲ್ಲರೂ ಠಾಣೆಗೆ ಬಂದರೂ ರಾಣಿ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ರಾಣಿಯ ಬಂಡವಾಳ ಬಯಲಾಗಿದೆ.

ಮಾರ್ಬಲ್ ಸಗಟು ವ್ಯಾಪಾರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 'ಶ್ರೀಕಾಂತ್' ಮಾರ್ಬಲ್ ರಖಂ ವ್ಯಾಪಾರಿಗಳಿಂದ ಭಾರೀ ಮೊತ್ತದ ಹಣ ಸಂಗ್ರಹಿಸಿದ್ದಳು. ಆದರೆ ಅದನ್ನು ಕಂಪನಿಯ ಖಾತೆಗೆ ಜಮಾ ಮಾಡಿರಲಿಲ್ಲ.

'ಶ್ರೀಕಾಂತ್' ತಾನು ಕಚೇರಿಗೆ ನೀಡಿದ್ದ ವಿಳಾಸದಂತೆ ಪೊಲೀಸರು ಮನೆಗೆ ಹೋಗಿ, ಆಕೆಯ ತಂದೆಯಲ್ಲಿ ಫೋಟೋ ತೋರಿಸಿ, 'ಎಲ್ಲಿ' ಎಂದು ಕೇಳಿದ್ದರು. ಆಗ ಇದು ಶ್ರೀಕಾಂತ್ ಅಲ್ಲ, ನಮ್ಮ ಮಗಳು ರಾಣಿ. ತಮಗೆ ಮೂವರು ಹೆಣ್ಮಕ್ಕಳಿದ್ದಾರೆಯೇ ಹೊರತು ಗಂಡು ಮಕ್ಕಳಿಲ್ಲ ಎಂದು ಆಕೆಯ ತಂದೆ ಪೊಲೀಸರಿಗೆ ತಿಳಿಸಿದ್ದರು.

ಬಳಿಕ ರಾಣಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಲಿಂಗ ಪರೀಕ್ಷೆ ಮಾಡಿಸಲಾಯಿತು. ಆಗ ಆಕೆ ಹೆಣ್ಣೆಂಬುದು ತಿಳಿದು ಬಂತು.

ಆಕೆಯ ಮೇಲೀಗ ವಂಚನೆ, ಸೋಗು ಹಾಕಿ ಮೋಸ ಪ್ರಕರಣಗಳನ್ನು ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ