ರಾಷ್ಟ್ರಧ್ವಜದಲ್ಲಿ ಸ್ಥಾನ ಪಡೆದುಕೊಂಡಿರುವ ಬಣ್ಣಗಳಲ್ಲೊಂದಾದ ಕೇಸರಿಯನ್ನು ಭಯೋತ್ಪಾದನೆಗೆ ಸಂಬಂಧ ಕಲ್ಪಿಸಬಾರದು ಎಂದಿರುವ ಬಿಜೆಪಿ, ಈ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.
ಕೇಸರಿ ಎಂಬುದು ಕೇವಲ ಹಿಂದೂ ಧರ್ಮದ ಸಂಕೇತ ಮಾತ್ರವಲ್ಲ. ಇದು ರಾಷ್ಟ್ರಧ್ವಜದ ಭಾಗ. ಕೇಸರಿಯನ್ನು ಭಯೋತ್ಪಾದನೆಯ ಜತೆ ತಳುಕು ಹಾಕಿರುವುದು ಸರಿಯಲ್ಲ ಎಂದು ಬಿಜೆಪಿ ವಕ್ತಾರ ಸಯ್ಯದ್ ಶಹನಾವಾಜ್ ಹುಸೇನ್ ಅಭಿಪ್ರಾಯಪಟ್ಟರು.
ಈ ದೇಶವನ್ನು ಅಪಾರವಾಗಿ ಪ್ರೀತಿಸುವ ನಾನೊಬ್ಬ ಮುಸ್ಲಿಂ. ನಮ್ಮ ದೇಶದ ಧ್ವಜದಲ್ಲಿರುವ ಮೊದಲ ಬಣ್ಣ ಕೇಸರಿ, ನಂತರದ ಮಧ್ಯದಲ್ಲಿರುವ ಬಿಳಿ ಮತ್ತು ಕೆಳಗಿರುವ ಹಸಿರು ಬಣ್ಣವನ್ನು ಮತ್ತು ನನ್ನ ದೇಶವನ್ನು ಪ್ರೀತಿಸುತ್ತೇನೆ. ಈ ಧ್ವಜದಲ್ಲಿರುವ ಎಲ್ಲಾ ಬಣ್ಣಗಳೂ ನಮ್ಮದು ಮತ್ತು ನಮ್ಮೆಲ್ಲರದು. ನಾವು ಆ ಬಣ್ಣಗಳಲ್ಲಿದ್ದೇವೆ ಎಂದು ಪತ್ರಕರ್ತರ ಜತೆ ಮಾತನಾಡುತ್ತಾ ಹುಸೇನ್ ವಿವರಣೆ ನೀಡಿದರು.
ಹೀಗಾಗಿ ಯಾರೊಬ್ಬರೂ ಬಣ್ಣಗಳನ್ನು ಗುರಿ ಮಾಡಿ ಭಯೋತ್ಪಾದನೆಯನ್ನು ಪ್ರತ್ಯೇಕಗೊಳಿಸುವುದು ಸಾಧ್ಯವಿಲ್ಲ. ರಾಷ್ಟ್ರಧ್ವಜವನ್ನು ಭಯೋತ್ಪಾದನೆ ಜತೆ ತಳುಕು ಹಾಕುವುದು ಬೇಡ ಎಂದಷ್ಟೇ ನಾವು ಚಿದಂಬರಂ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಮುಸ್ಲಿಂರನ್ನು ಶಂಕಿಸಬಾರದು: ಪಾಸ್ವಾನ್ ಯಾವುದೇ ಬಾಂಬ್ ಸ್ಫೋಟ ನಡೆದಾಗ ಅದರ ಕುರಿತು ಮೊದಲ ಶಂಕೆ ಮುಸ್ಲಿಂ ವ್ಯಕ್ತಿಯೋರ್ವನ ಮೇಲೆ ಇಡುವುದು ಸರಿಯಲ್ಲ ಎಂದು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ವರಿಷ್ಠ ರಾಮ್ ವಿಲಾಸ್ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಎಲ್ಲದಕ್ಕೂ ಮುಸ್ಲಿಮರ ಮೇಲೆ ಆರೋಪ ಮಾಡುವುದು ಮತ್ತು ಪಿತೂರಿಗಳನ್ನು ಸೃಷ್ಟಿಸುವುದು ಪರಿಹಾರವಲ್ಲ. ಕೇಸರಿ ಮಂದಿ ಒಳಸಂಚನ್ನು ಸೃಷ್ಟಿಸಿದ ನಂತರ ಅಮಾಯಕ ಮುಸ್ಲಿಮರನ್ನು ಬಂಧಿಸಲಾಗುತ್ತದೆ. ಇದು ಭಯೋತ್ಪಾದನೆಯನ್ನು ಕೊನೆಗಾಣಿಸುವ ಬದಲು ಹೆಚ್ಚು ಮಾಡುತ್ತದೆ ಎಂದರು.
ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಪೊಲೀಸ್ ಮುಖ್ಯಸ್ಥರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಚಿದಂಬರಂ, ದೇಶದಲ್ಲಿ ಕೇಸರಿ ಭಯೋತ್ಪಾದನೆ ಮಿತಿ ಮೀರುತ್ತಿದೆ. ಈ ಹಿಂದೆ ಹಲವು ಬಾಂಬ್ ಸ್ಫೋಟಗಳಲ್ಲಿ ಇದರ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ ಎಂದು ಹೇಳಿದ್ದರು.
ಈ ಹೇಳಿಕೆ ಬಗ್ಗೆ ಸಂಸತ್ ಮತ್ತು ಸಂಸತ್‌ನ ಹೊರಗಡೆ ಬಿಜೆಪಿ, ಶಿವಸೇನೆ, ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಪಕ್ಷಗಳು- ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಸ್ವತಃ ಕಾಂಗ್ರೆಸ್ ಕೂಡ ಭಯೋತ್ಪಾದನೆಯನ್ನು ಒಂದು ಬಣ್ಣಕ್ಕೆ ಹೋಲಿಸಲಾಗದು, ಭಯೋತ್ಪಾದನೆಯೆನ್ನುವುದರ ಬಣ್ಣ ಕಪ್ಪು ಎಂದು ಹೇಳಿತ್ತು.