ಗೃಹಸಚಿವರು 'ಕೇಸರಿ ಭಯೋತ್ಪಾದನೆ' ಎಂಬ ಮಾತು ಬಳಸಿರುವುದಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೋಮವಾರ ಆಗ್ರಹಿಸಿದ್ದಾರೆ.
ಆಡಳಿತ ವ್ಯವಸ್ಥೆಯನ್ನು ಪ್ರಧಾನಿಯನ್ನು ಹೊರತುಪಡಿಸಿ ಬೇರೆ ಯಾರೋ ನಿಯಂತ್ರಿಸುತ್ತಿದ್ದು, ಮನಮೋಹನ್ ಸಿಂಗ್ ಅವರು ಅಸಹಾಯಕರಾಗಿದ್ದಾರೆ. ಇದರಿಂದ ಪ್ರಧಾನಿ ಹುದ್ದೆಯ ಘನತೆಯೂ ಕಡಿಮೆಯಾಗಿದೆ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮೋದಿ ಅಭಿಪ್ರಾಯಪಟ್ಟರು.
'ಕೇಸರಿ ಭಯೋತ್ಪಾದನೆ' ವ್ಯಾಖ್ಯಾನ ಮಾಡಿರುವ ಗೃಹಸಚಿವ ಪಿ. ಚಿದಂಬರಂ ಅವರನ್ನು ಟೀಕಿಸುತ್ತಾ ಮೋದಿ, ಒಂದು ಕಾಲದಲ್ಲಿ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ಪಟೇಲ್ ಅವರು ಅಲಂಕರಿಸಿದ್ದ ಕುರ್ಚಿಗೆ ಈಗಿನ ಗೃಹಸಚಿವರು ಅಪಮಾನ ಎಸಗಿರುವುದು ದುರ್ದೈವದ ಪರಮಾವಧಿ ಎಂದರು.
ಕೇಸರಿ ಧ್ವಜವಿಲ್ಲದ ಯಾವುದಾದರೂ ದೇವಾಲಯವಿದೆಯೇ? ಹಾಗಿದ್ದರೆ ಅದು ಭಯೋತ್ಪಾದನಾ ಚಟುವಟಿಕೆಯ ಕೇಂದ್ರವೆಂದು ನೀವು ಕರೆಯುತ್ತೀರಾ? ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ, ಶಂಕರಾಚಾರ್ಯ, ಸ್ವಾಮಿ ರಾಮದಾಸ್ ಮತ್ತು ಇತರರು ಖಾವಿ ಬಟ್ಟೆಯನ್ನು ತೊಟ್ಟು ಈ ದೇಶಕ್ಕಾಗಿ ತ್ಯಾಗ ಮಾಡಿದವರು. ಅವರನ್ನೂ ಭಯೋತ್ಪಾದಕರೆಂದು ಕರೆಯುತ್ತೀರಾ ಎಂದು ಎಂದಿನಂತೆ ತನ್ನ ವಾಗ್ಝರಿಯನ್ನು ಮೋದಿ ಹರಿಸಿದರು.
ಈ ಪ್ರಶ್ನೆಗಳಿಗೆ ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಉತ್ತರಿಸಬೇಕು. ಅಲ್ಲದೆ ಪ್ರಧಾನ ಮಂತ್ರಿಯವರು ಇದಕ್ಕಾಗಿ ದೇಶದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕೇಸರಿ ಬಣ್ಣವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದಿರುವ ಮೋದಿ, ಗೃಹಸಚಿವರು ಕೇಸರಿ ಭಯೋತ್ಪಾದನೆ ಎಂದು ವ್ಯಾಖ್ಯಾನ ಮಾಡುವ ಮೂಲಕ ಅವರು ಭಾರತೀಯ ಪರಂಪರೆಗೆ ಅಪಮಾನ ಎಸಗಿದ್ದಾರೆ ಎಂದರು.