ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತಿನಲ್ಲಿ ಸಿಬಿಐ ದುರ್ಬಳಕೆ; ಸಂಸತ್ತಿನಲ್ಲಿ ಕೋಲಾಹಲ (CBI | BJP | Sohrabuddin case | Geetha Johri)
Bookmark and Share Feedback Print
 
ಬಿಜೆಪಿ ಆಡಳಿತವಿರುವ ಗುಜರಾತಿನಲ್ಲಿ ಸಿಬಿಐ ದುರ್ಬಳಕೆ ಮತ್ತು ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ರಾಜಕೀಯ ನಾಯಕರನ್ನು ಹೆಸರಿಸುವಂತೆ ಐಪಿಎಸ್ ಅಧಿಕಾರಿ ಗೀತಾ ಜೋಹ್ರಿಯವರ ಮೇಲೆ ಸಿಬಿಐ ಒತ್ತಡ ಹೇರುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಸಂಸತ್ ಮುಂಗಾರು ಅಧಿವೇಶನ ಮುಕ್ತಾಯಕ್ಕೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ ಎನ್ನುವಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಿಂದ ಸಿಬಿಐ ದುರ್ಬಳಕೆಯಾಗುತ್ತಿದೆ, ಈ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ.

ಆದರೆ ಇದಕ್ಕೆ ಸ್ಪೀಕರ್ ಮೀರಾ ಕುಮಾರ್ ನಕಾರ ಸೂಚಿಸದರು. ಅಷ್ಟಕ್ಕೇ ಸುಮ್ಮನಾಗದ ಬಿಜೆಪಿ ಸಂಸದರು ಘೋಷಣೆಗಳನ್ನು ಕೂಗುತ್ತಾ ಸ್ಪೀಕರ್ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಗದ್ದಲದ ಕಾರಣದಿಂದ ಸದನವನ್ನು ಮುಂದೂಡಲಾಗಿದೆ.

ಅತ್ತ ರಾಜ್ಯಸಭೆಯಲ್ಲೂ ಇದೇ ಕಾರಣಕ್ಕೆ ಕಲಾಪಕ್ಕೆ ಅಡ್ಡಿಪಡಿಸಲಾಗಿದೆ. ಅಧಿವೇಶನ ಆರಂಭದ ದಿನಗಳಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಲಾಪಗಳು ನಡೆಯದೇ ಇದ್ದ ಕಾರಣ ಇದೀಗ ಎರಡು ದಿನಗಳ ಕಾಲ ವಿಸ್ತರಿಸಲಾಗಿದ್ದು, ನಾಳೆ ಮುಕ್ತಾಯಗೊಳ್ಳಲಿದೆ.

2005ರಲ್ಲಿ ಗುಜರಾತ್ ಪೊಲೀಸರು ನಡೆಸಿದ ಎನ್‌ಕೌಂಟರಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಸೇರಿದಂತೆ ಇನ್ನಿತರ ರಾಜಕೀಯ ನಾಯಕರನ್ನು ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರುತ್ತಿದೆ ಎಂದು ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಐಪಿಎಸ್ ಅಧಿಕಾರಿ ಗೀತಾ ಜೋಹ್ರಿ ಸುಪ್ರೀಂ ಕೋರ್ಟಿಗೆ ದೂರು ನೀಡಿರುವುದನ್ನು ಬಿಜೆಪಿ ಪ್ರಸ್ತಾಪಿಸಿ, ಸ್ಪಷ್ಟನೆ ನೀಡುವಂತೆ ಆಗ್ರಹಿಸಿತು.

ಪ್ರಸಕ್ತ ರಾಜ್‌ಕೋಟ್ ಪೊಲೀಸ್ ಆಯುಕ್ತರಾಗಿರುವ ಗೀತಾ ಜೋಹ್ರಿಯವರ ಮೇಲೆ ಸಿಬಿಐ ಈ ರೀತಿಯ ಒತ್ತಡ ಹೇರುತ್ತಿರುವುದು ಗಂಭೀರ ವಿಚಾರ. ಬಿಜೆಪಿ ಆಡಳಿತವಿರುವ ರಾಜ್ಯದ ರಾಜಕಾರಣಿಗಳನ್ನು ಸಿಕ್ಕಿಸಿ ಹಾಕಲು ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬುದು ಅವರ ಆರೋಪವಾಗಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಪ್ರಸ್ತಾಪಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರಕಾರ ತನಿಖೆ ನಡೆಸಿರುವಾಗ, ಇಂತಹ ಘಟನೆಗಳು ನಡೆದಿರುವುದಕ್ಕೆ ಕೇಂದ್ರವು ಪ್ರತಿಕ್ರಿಯೆ ನೀಡಬೇಕು. ಹಾಗೊಂದು ವೇಳೆ ಸಿಬಿಐಯು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು ನಿಜವಾಗಿದ್ದಲ್ಲಿ, ಸದನವು ಸಿಬಿಐಯ ರಾಜಕೀಕರಣ ಮತ್ತು ದುರ್ಬಳಕೆ ಕುರಿತು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಆದರೆ ಇದಕ್ಕೆ ಆಡಳಿತ ಪಕ್ಷದ ಸಾಲಿನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಲ್ಲದೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಇದರ ಪ್ರಸ್ತಾಪ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿತು.

ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪೃಥ್ವಿರಾಜ್ ಚೌಹಾನ್, ಬೇಡಿಕೆಯಂತೆ ಸಿಬಿಐ ಕಾರ್ಯನಿರ್ವಹಣೆ ಕುರಿತು ಚರ್ಚೆ ನಡೆಸಲು ಸರಕಾರ ಸಂಪೂರ್ಣವಾಗಿ ಸಿದ್ಧವಾಗಿದೆ; ಆದರೆ ಜೋಹ್ರಿಯವರ ಆರೋಪವು ಸ್ಪಷ್ಟವಾಗಿ ಸುಳ್ಳೆಂಬುದು ಕಂಡು ಬರುತ್ತಿದೆ. ಇದು ಅಧಿಕಾರಿ ಮತ್ತು ಸುಪ್ರೀಂ ಕೋರ್ಟಿಗೆ ಸಂಬಂಧಪಟ್ಟ ವಿಚಾರ. ಈ ವಿಚಾರದಲ್ಲಿ ತನಿಖಾ ದಳವನ್ನು ಮಧ್ಯೆ ತರಬೇಕಿಲ್ಲ ಎಂದರು.

ಸಚಿವರ ಹೇಳಿಕೆಯಿಂದ ಸಮಾಧಾನಗೊಳ್ಳದ ಪ್ರತಿಪಕ್ಷಗಳ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ನಂತರ ಸ್ಪೀಕರ್ ಹಮೀದ್ ಅನ್ಸಾರಿ ಕಲಾಪವನ್ನು ಮುಂದೂಡಬೇಕಾಯಿತು.
ಸಂಬಂಧಿತ ಮಾಹಿತಿ ಹುಡುಕಿ