ಜೈಶ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತೋಯ್ಬಾ ಮುಂತಾದ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಕಾರ್ಯಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್ಐ 'ಜಮ್ಮು ಕಾಶ್ಮೀರ ಮುಜಾಹಿದೀನ್' ಎಂಬ ಸಂಘಟನೆಯನ್ನು ಹುಟ್ಟು ಹಾಕಿದೆ ಎಂದು ವರದಿಗಳು ಹೇಳಿವೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಮರಳಿರುವ ಭಯೋತ್ಪಾದಕನ ಮೂಲಕ ಇದು ತಿಳಿದು ಬಂದಿದೆ. ಲಿಖಾಯತ್ ಹುಸೇನ್ ಎಂಬಾತ ಪೂಂಛ್ ವಲಯದ ಗೊಟ್ರಿಯಾನ್ ಎಂಬಲ್ಲಿ ಎಲ್ಒಸಿ ಬಳಿ ಭಾರತೀಯ ಸೇನೆಗೆ ಶನಿವಾರ ಶರಣಾಗಿದ್ದಾನೆ. ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಆತ ಜಮ್ಮು-ಕಾಶ್ಮೀರಕ್ಕೆ ವಾಪಸ್ಸಾಗಿದ್ದಾನೆ.
ಇದೀಗ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲ್ಪಟ್ಟಿರುವ ಉಗ್ರ ಲಿಖಾಯತ್ ಹೇಳಿರುವ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ತರಬೇತಿ ಶಿಬಿರಗಳಿಗೆ ಐಎಸ್ಐ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಹೊಸ ಭಯೋತ್ಪಾದಕ ಸಂಘಟನೆಯನ್ನೂ ಅಸ್ತಿತ್ವಕ್ಕೆ ತಂದದ್ದಾರೆ.
ಈ ಸಂಘಟನೆಗೆ ಹಿಂದೆಲ್ಲ ನೀಡುತ್ತಾ ಬಂದಿದ್ದ ಲಷ್ಕರ್ ಇ ತೋಯ್ಬಾ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಗಳಿರುವ ಇಸ್ಲಾಮಿಕ್ ಪ್ರಧಾನ ಹೆಸರನ್ನು ಬಿಟ್ಟು ಜಮ್ಮು-ಕಾಶ್ಮೀರದ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ನಾಮಕರಣ ಮಾಡಲಾಗಿದೆ.
ಜೈಶ್ ಮತ್ತು ಲಷ್ಕರ್ ಭಾರತ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ನಿಷೇಧಕ್ಕೊಳಗಾಗಿರುವುದರಿಂದ, ವಿದೇಶಗಳಿಂದ ಆರ್ಥಿಕ ಸಹಕಾರ ಪಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಹೊಸ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ.
ನೂತನ 'ಜಮ್ಮು ಕಾಶ್ಮೀರ್ ಮುಜಾಹಿದೀನ್' ಸಂಘಟನೆಗೆ ಆಯ್ಕೆಯಾದ 100 ಮಂದಿಯಲ್ಲಿ ತಾನು ಕೂಡ ಒಬ್ಬ ಎಂದು ಲಿಖಾಯತ್ ಹೇಳಿಕೊಂಡಿದ್ದು, ಲಷ್ಕರ್, ಜೈಶ್ ಇ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗಳಿಗಾಗಿ ಕೆಲಸ ಮಾಡಿದ್ದ ಭಯೋತ್ಪಾದಕರಿಗೆ ಉನ್ನತ ಮಟ್ಟದ ತರಬೇತಿ ನೀಡಿ ಹೊಸ ಸಂಘಟನೆಗಳಿಗೆ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾನೆ.
ನೂತನ ಉಗ್ರ ಸಂಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಲಿಖಾಯತ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
1999ರಲ್ಲಿ ಮೊದಲ ಬಾರಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿದ್ದ ಲಿಖಾಯತ್, 2000ದಲ್ಲಿ ವಾಪಸ್ ಬಂದಿದ್ದ. ಎರಡು ವರ್ಷಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಉಳಿದುಕೊಂಡಿದ್ದ ಆಥ ಬಳಿಕ ತನ್ನ ಪತ್ನಿ ಖಾಲಿದಾ ಜತೆ 2001ರಲ್ಲಿ ಪಾಕಿಸ್ತಾನದತ್ತ ಹೋಗಿದ್ದ ಎಂದು ವರದಿಗಳು ಹೇಳಿವೆ.