ಬಂಡುಕೋರ ಮಾವೋವಾದಿಗಳ ವಿರುದ್ಧ ಆಂದೋಲನ ರೂಪಿಸಲು ಸಹಕಾರ ನೀಡುವಂತೆ ಜಾರ್ಖಂಡ್ ಪೊಲೀಸರು ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಮೊರೆ ಹೋಗಿದ್ದಾರೆ.
ಶ್ರೀಲಂಕಾ ತ್ರಿಕೋನ ಸರಣಿಯಿಂದ ವಾಪಸ್ಸಾಗಿರುವ ಧೋನಿಯನ್ನು ರಾಂಚಿಯಲ್ಲಿನ ಹರ್ಮು ವಸತಿ ಕಾಲೊನಿ ಮನೆಯಲ್ಲಿ ಭೇಟಿ ಮಾಡಿದ ಜಾರ್ಖಂಡ್ ಪೊಲೀಸ್ ಮಹಾ ನಿರ್ದೇಶಕ ನೇಯಜ್ ಅಹ್ಮದ್, ರಾಜ್ಯದ ಜನತೆಯನ್ನು ಸೂಕ್ತ ಹಾದಿಯಲ್ಲಿ ಕ್ರಮಿಸುವಂತೆ ಮನವಿ ಮಾಡಬೇಕೆಂದು ಕೇಳಿಕೊಂಡರು ಎಂದು ಹೇಳಲಾಗಿದೆ.
ಇದೊಂದು ಸೌಜನ್ಯಯುತ ಭೇಟಿಯಾಗಿತ್ತು, ಅಷ್ಟೇ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರಾದರೂ, ಮೂಲಗಳ ಪ್ರಕಾರ ನಕ್ಸಲ್ ವಿರೋಧಿ ಹೋರಾಟಕ್ಕೆ ಧೋನಿಯ ಬೆಂಬಲವನ್ನು ಪೊಲೀಸರು ಕೇಳಿದ್ದಾರೆ.
ಮಾವೋವಾದಿಗಳು ಹಿಂಸಾಚಾರವನ್ನು ತ್ಯಜಿಸುವ ಮತ್ತು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡುವ ಸಂದೇಶವನ್ನೊಳಗೊಂಡ ವೀಡಿಯೋವೊಂದನ್ನು ತಯಾರು ಮಾಡುವ ಕುರಿತು ಈ ಸಂದರ್ಭದಲ್ಲಿ ಪೊಲೀಸರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜತೆಗೆ ಜನತೆಯಲ್ಲೂ ಎಡರಂಗದ ಕ್ರಾಂತಿಕಾರಿಗಳನ್ನು ಬೆಂಬಲಿಸದಂತೆ, ಅವರ ಪಾಳಯ ಸೇರದಂತೆ ಮನವಿ ಮಾಡುವ ಸಂದೇಶವೂ ವೀಡಿಯೋ ಒಳಗೊಳ್ಳಬೇಕು ಎನ್ನುವುದು ಪೊಲೀಸರ ಚಿಂತನೆ.
ರಾಜ್ಯ ಪೊಲೀಸರ ಮನವಿಗೆ ಧೋನಿ ಇದುವರೆಗೂ ತನ್ನ ಒಪ್ಪಿಗೆಯನ್ನು ಸೂಚಿಸಿಲ್ಲ. ರಾಂಚಿಯ ಕ್ರಿಕೆಟ್ ಆಟಗಾರನೇ ಮಾವೋವಾದಿಗಳ ಹಿಟ್ ಲಿಸ್ಟ್‌ನಲ್ಲಿರುವುದರಿಂದ, ಅವರಿಗೆ ಪ್ರಸಕ್ತ ವೈ ದರ್ಜೆ ಭದ್ರತೆ ನೀಡಲಾಗುತ್ತಿದೆ.
ಈ ಹಿಂದೆ ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸುವ ಮತ್ತು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಧೋನಿ ಪಾಲ್ಗೊಂಡಿರುವುದರಿಂದ ಮಾವೋವಾದಿಗಳ ಮತ್ತು ಜನತೆಯ ಮನಸ್ಸನ್ನು ಬದಲಾಯಿಸುವ ಕಾರ್ಯಕ್ಕೂ ಕೈ ಜೋಡಿಸಲಿದ್ದಾರೆ ಎನ್ನುವುದು ಪೊಲೀಸರ ಭರವಸೆ.