ದಲಿತ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ಹಣೆಪಟ್ಟಿ ಕಟ್ಟಿ ಹೀಯಾಳಿಸಿದ್ದಲ್ಲದೆ, ಗ್ರಾಮಸ್ಥರು ಸೇರಿಕೊಂಡು ಮನಬಂದಂತೆ ಥಳಿಸಿ ಊರು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿರುವ ಘಟನೆಯೊಂದು ರಾಜಸ್ತಾನದಿಂದ ವರದಿಯಾಗಿದೆ.
ಜೈಪುರದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಟಾಂಕ್ ಜಿಲ್ಲೆಯ ಜಲ್ರಾ ಗ್ರಾಮದಲ್ಲಿ ನಡೆದಿರುವ ಘಟನೆಯಿದು. ಕೆಲವು ಗ್ರಾಮಸ್ಥರು ನನ್ನನ್ನು ಮಾಟಗಾತಿ ಎಂದು ಕರೆದು ಅಪಮಾನ ಮಾಡಿದ್ದು, ಥಳಿಸಿದ್ದಾರೆ ಎಂದು ಕಮಲಾ ಬೈರ್ವಾ ಎಂಬ ಮಹಿಳೆ ದೂರ ನೀಡಿದ್ದಾರೆ.
ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ನನ್ನನ್ನು ಮಾಟಗಾತಿ ಎಂದು ಕರೆಯುತ್ತಾರೆ. ನನ್ನನ್ನು ಅಪಮಾನ ಮಾಡುವುದಲ್ಲದೆ, ಮನಬಂದಂತೆ ಹೊಡೆಯುತ್ತಾ ಚಿತ್ರಹಿಂಸೆ ನೀಡುತ್ತಿದ್ದಾರೆ. ನಾನು ಗ್ರಾಮವನ್ನು ಬಿಟ್ಟು ಹೋಗಬೇಕೆಂದು ಹೀಗೆ ಮಾಡುತ್ತಿದ್ದಾರೆ ಎಂದು ಕಾರ್ಮಿಕಳಾಗಿರುವ ಕಮಲಾ ವಿವರಣೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ನನ್ನನ್ನು ಮರವೊಂದಕ್ಕೆ ಕಟ್ಟಿ ಹಾಕಿ, ಮನಸೋಇಚ್ಛೆ ಹೊಡೆದರು. ಇದರ ಬಳಿಕ ನನ್ನಲ್ಲಿ ಭೀತಿ ಮನೆ ಮಾಡಿದೆ. ನನ್ನನ್ನು ಸಾವಿನ ಹತ್ತಿರ ಕೊಂಡೊಯ್ದಿರುವ ಇಂತಹ ಸ್ಥಳದಲ್ಲಿ ನಾನು ಹೇಗೆ ಜೀವನ ಮಾಡಲಿ ಎಂದು ಆಕೆ ಪ್ರಶ್ನಿಸಿದ್ದಾರೆ.
ಇಬ್ಬರು ಮಹಿಳೆಯರು ಸೇರಿದಂತೆ ಐವರ ವಿರುದ್ಧ ಕಮಲಾ ಅವರು ಟಾಂಕ್ ಜಿಲ್ಲೆಯ ಉನೈರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಭಯ ಬಣಗಳ ಹೇಳಿಕೆಗಳನ್ನು ನಾವು ಪಡೆದುಕೊಳ್ಳುತ್ತೇವೆ. ದೂರು ನೀಡುರವ ಕಮಲಾ ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸುತ್ತೇವೆ. ಅಗತ್ಯ ಬಿದ್ದಲ್ಲಿ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸಾಮಾನ್ಯ ವರ್ತನೆಯನ್ನು ಹೊಂದಿರುವ ಮಹಿಳೆಯರನ್ನು (ಮಾಟಗಾತಿ) ಅತಿ ಹೆಚ್ಚು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ರಾಜಸ್ತಾನದಲ್ಲಿ ಆಗಾಗ ಅವರನ್ನು ಸಮಾಜವು ಹೀನ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದು, ಹಲವು ಆತ್ಮಹತ್ಯಾ ಪ್ರಕರಣಗಳೂ ಸಂಭವಿಸುತ್ತಿವೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಸ್ತಾನ ಮಹಿಳಾ ಆಯೋಗವು ನೂತನ ಕಾನೂನೊಂದನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಈ ಮಸೂದೆಯ ಪ್ರಕಾರ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಿರುವುದು ಸಾಬೀತಾದಲ್ಲಿ ಗರಿಷ್ಠ ಶಿಕ್ಷೆಯನ್ನು ನೀಡುವ ಅವಕಾಶಗಳಿವೆ.
ಮಸೂದೆಯ ಕರಡನ್ನು ಮೂರು ವರ್ಷಗಳ ಹಿಂದೆಯೇ ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಆದರೆ ಇನ್ನೂ ಅದು ವಿಧಾನಸಭೆಯಲ್ಲಿ ಮಂಡನೆಯಾಗಿಲ್ಲ.