ಆತ ಒಂದು ನಿಮಿಷವೂ ಸ್ವತಂತ್ರವಾಗಿ ನಿಲ್ಲಲಾರ. ಕಷ್ಟಪಟ್ಟು ದಿನಕ್ಕೊಮ್ಮೆ ಶೌಚಾಲಯಕ್ಕೆ ಹೋಗುತ್ತಾನೆ. ಕಳೆದ ಐದು ವರ್ಷಗಳಿಂದ ಮನೆಯಿಂದ ಹೊರಗೆ ಬಂದೇ ಇಲ್ಲ. ಕಾರಣ ದೈತ್ಯಾಕಾರವಾಗಿ ಬೆಳೆದಿರುವ ದೇಹ.
ಆತನ ಹೆಸರು ನಿಜಾರ್ ಅಹ್ಮದ್, ವಯಸ್ಸು 53. ತೂಕ 190 ಕೇಜಿ. ಇದೀಗ ಮನೆಯ ಬಾಗಿಲು, ಗೋಡೆಗಳನ್ನು ಒಡೆದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಾಯಕಾರಿ ಶಸ್ತ್ರಚಿಕಿತ್ಸೆಯಿಂದ ಆತನ ಬದುಕು ಹಸನಾಗುವ ಕುರಿತು ವೈದ್ಯರೇನೂ ಸಂಪೂರ್ಣ ಭರವಸೆ ನೀಡುತ್ತಿಲ್ಲ. ಆದರೂ ಶಸ್ತ್ರಚಿಕಿತ್ಸೆ ನಡೆಸಿದ ಮೇಲೆ ನಾನು ಮೊದಲು ಮಾಡುವ ಕೆಲಸ ಮಸೀದಿಗೆ ಹೋಗಿ ನಮಾಜ್ ಮಾಡುವುದು ಎಂದು ಹೇಳುತ್ತಿದ್ದಾನೆ.
ದಕ್ಷಿಣ ಮುಂಬೈಯಲ್ಲಿನ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಅಹ್ಮದ್ ತನ್ನ ಕುಟುಂಬದೊಂದಿಗೆ ನೆಲೆಸಿದ್ದ ಅಹ್ಮದ್‌ನನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ ಅಗ್ನಿಶಾಮಕ ದಳದವರೂ ಬಂದಿದ್ದರು. ಮನೆಯ ಗೋಡೆ ಮತ್ತು ಬಾಗಿಲುಗಳನ್ನು ಒಡೆದು ವಿಶೇಷ ಆಂಬುಲೆನ್ಸ್‌ನಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕೊಂಡೊಯ್ಯಲಾಗಿಯಿತು.
ಹೊಟೇಲ್‌ನಲ್ಲಿ ಖಜಾಂಚಿಯಾಗಿದ್ದ... ಐದು ವರ್ಷಗಳ ಹಿಂದೆ ಅಹ್ಮದ್ ಡೊಂಗ್ರಿಯಲ್ಲಿನ ರೆಸ್ಟಾರೆಂಟ್ ಒಂದರಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆಗ ಬೊಜ್ಜು ಬೆಳೆಯಲಾರಂಭಿಸಿತ್ತು. ಕ್ರಮೇಣ ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ ತಲುಪಿದಾಗ ಮನೆಯಲ್ಲೇ ಉಳಿಯುವುದು ಆತನಿಗೆ ಅನಿವಾರ್ಯವಾಗಿತ್ತು.
ಓರ್ವ ಕ್ಯಾಷಿಯರ್ ಆಗಿ ನನಗೆ ಹೆಚ್ಚಿನ ಜವಾಬ್ದಾರಿಯಿತ್ತು. ರೆಸ್ಟಾರೆಂಟ್‌ನಲ್ಲಿ ನಾನು ದಿನದಲ್ಲಿ 16ರಿಂದ 18 ಗಂಟೆಗಳಷ್ಟು ಒಂದೇ ಕಡೆ ನಿಂತುಕೊಂಡೇ ಕೆಲಸ ಮಾಡಬೇಕಾಗಿತ್ತು ಎಂದು ಅಹ್ಮದ್ ವಿವರಣೆ ನೀಡಿದ್ದಾನೆ.
ದೇಹದ ತೂಕ 140 ಕೇಜಿಯವರೆಗೆ ತಲುಪುವ ತನಕ ಆತ ಕೆಲಸಕ್ಕೆ ಹೋಗುತ್ತಿದ್ದ. ನಂತರ ನಡೆದಾಡುವುದೇ ಸಾಧ್ಯವಾಗದಾಗ ಮನೆಯಲ್ಲೇ ಉಳಿಯುವಂತಾಗಿತ್ತು.
ದಿನಕ್ಕೊಮ್ಮೆ ಮಾತ್ರ ಟಾಯ್ಲೆಟ್... ದೇಹ ಭಾರೀ ಗಾತ್ರದಲ್ಲಿ ಬೆಳೆದಿರುವ ಕಾರಣ ನಡೆದಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದಿನಕ್ಕೊಂದು ಬಾರಿ ಮಾತ್ರ ತಾನು ಟಾಯ್ಲೆಟ್‌ಗೆ ಹೋಗುತ್ತೇನೆ. ಕಷ್ಟಪಟ್ಟು ನೈಸರ್ಗಿಕ ಕರೆಯನ್ನು ತಡೆ ಹಿಡಿಯುತ್ತೇನೆ. ಇದರಿಂದಾಗಿ ನನ್ನ ದೇಹದಲ್ಲಿ ಯೂರಿಕ್ ಆಸಿಡ್ ಶೇಖರಣೆಯೂ ಹೆಚ್ಚಾಗಿದೆ. ಎಲುಬುಗಳಲ್ಲೂ ಸಮಸ್ಯೆ ಉಂಟಾಗಿದೆ. ನಡೆದಾಡುವಾಗ ವಿಪರೀತ ನೋವಾಗುತ್ತಿದೆ ಎಂದು ಅಹ್ಮದ್ ಹೇಳುತ್ತಾನೆ.
ಕಳೆದೈದು ವರ್ಷಗಳನ್ನು ಅಹ್ಮದ್ ಬಹುತೇಕ ಮಲಗಿ ಅಥವಾ ಕುಳಿತುಕೊಂಡೇ ಕಳೆದಿದ್ದಾನೆ. ತನ್ನ ಬವಣೆಗಳನ್ನು ವಿವರಿಸುವ ಆತ, ನನಗೇನೂ ಮಾಡಲು ಸಾಧ್ಯವಿರಲಿಲ್ಲ. ಟೀವಿ ನೋಡುವುದು, ಪ್ರಾರ್ಥನೆ ಮಾಡುವುದು, ಸುಮ್ಮನೆ ಮೇಲೆ ನೋಡುವುದು ಮತ್ತು ಯಾವುದಾದರೂ ವಿಶೇಷ ಶಕ್ತಿಯೊಂದು ನನ್ನನ್ನು ಈ ಶಿಕ್ಷೆಯಿಂದ ಪಾರು ಮಾಡುವುದನ್ನು ಎದುರು ನೋಡುತ್ತಿದ್ದೆ ಎನ್ನುತ್ತಾನೆ.
ಅದೃಷ್ಟವೆಂದರೆ ಅದೇ ರೀತಿ ಟೀವಿ ನೋಡುತ್ತಿದ್ದಾಗ ಬೊಜ್ಜು ಹೊಂದಿದವರಿಗೆಂದೇ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಅದನ್ನು ನೋಡಿ ಕರೆ ಮಾಡಿದ ನಂತರ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಆಸಿಮ್ ಆಜ್ಮಿಯವರೂ ಸಂಪರ್ಕಕ್ಕೆ ಬಂದರು. ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಅಹ್ಮದ್ ತಿಳಿಸಿದ್ದಾನೆ.
ತೀರಾ ಬಡಕುಟುಂಬವಿದು... ಅಹ್ಮದ್ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ದುಡಿಯವ ವಯಸ್ಸಿನಲ್ಲಿ ದೇಹವೂ ಅಡ್ಡ ಬಂತು. ಇದೀಗ ಆಧಾರವಾಗಿರುವವರು ಪತ್ನಿ ಮತ್ತು ಓರ್ವ ಮಗ ಮಾತ್ರ.
ಪತ್ನಿ ಹಸೀನಾ ಪಕ್ಕದ ಮನೆಗಳಲ್ಲಿ ಅಡುಗೆ ಮಾಡಿ ಅಷ್ಟೋ-ಇಷ್ಟೋ ಸಂಪಾದಿಸುತ್ತಾರೆ. ದ್ವಿತೀಯ ಪಿಯು ವಿದ್ಯಾರ್ಥಿಯಾಗಿರುವ ಮಗ ಇಜಾಜ್ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾನೆ.
ಆರನೇ ತರಗತಿಯಲ್ಲಿರುವ ಪುತ್ರಿ ಅಫಿಪಾಹ್ ಏನೊಂದು ತಿಳಿಯುವ ವಯಸ್ಸಲ್ಲ. ಆದರೂ ತನ್ನ ತಂದೆ ಶೀಘ್ರದಲ್ಲೇ ಶಾಲೆಗೆ ಬಂದು ತನ್ನನ್ನು ಮತ್ತು ಶಿಕ್ಷಕರನ್ನು ಭೇಟಿ ಮಾಡುವಂತಾಗಲಿದ್ದಾರೆ ಎಂಬ ಭರವಸೆ ಆಕೆಯಲ್ಲಿದೆ.