ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಮರೆಗುಳಿ ಖಾಯಿಲೆಯಿಂದ ಬಳಲುತ್ತಿದೆ: ಕಾಂಗ್ರೆಸ್ (BJP | CBI | Congress | Manish Tewari)
Bookmark and Share Feedback Print
 
ಯುಪಿಎ ಸರಕಾರವು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಬಿಜೆಪಿ ಆರೋಪಿಸಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಕೇಸರಿ ಪಕ್ಷವು ಆಯ್ದ ಮರೆಗುಳಿ ರೋಗದಿಂದ ಬಳಲುತ್ತಿದೆ ಎಂದಿದೆ.

ಸಿಬಿಐ ದುರ್ಬಳಕೆ ವಿಚಾರವನ್ನು ಎತ್ತಲಾಗಿದೆ. ಇದೊಂದು ಆಯ್ದ ವಿಸ್ಮೃತಿ. ಸಿಬಿಐ ಹರೇನ್ ಪಾಂಡ್ಯ ಪ್ರಕರಣದಲ್ಲಿ ಸರಿಯಾಗಿತ್ತು, ಆದರೆ ಅಮಿತ್ ಶಾ ಪ್ರಕರಣದಲ್ಲಿ ತಪ್ಪು ಹಾದಿಯಲ್ಲಿದೆಯೇ ಎಂಬುದನ್ನು ನಾನು ಬಿಜೆಪಿಯಲ್ಲಿ ಪ್ರಶ್ನಿಸುತ್ತಿದ್ದೇನೆ. ಈಗ ಅವರು ಗೀತಾ ಜೋಹ್ರಿಯವರನ್ನು ಉದಾಹರಿಸುತ್ತಿದ್ದಾರೆ. ಆದರೆ ಹರೇನ್ ಪಾಂಡ್ಯ ಅವರ ತಂದೆಯವರು ನರೇಂದ್ರ ಮೋದಿಯವರತ್ತ ಬೆರಳು ತೋರಿಸಿದ್ದನ್ನು ಬಿಜೆಪಿ ಮರೆತು ಬಿಟ್ಟಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಲೇವಡಿ ಮಾಡಿದರು.

ಗುಜರಾತ್ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಅವರನ್ನು 2003ರಲ್ಲಿ ದುಷ್ಕರ್ಮಿಗಳು ಅಹಮದಾಬಾದ್‌ನಲ್ಲಿ ಗುಂಡಿಕ್ಕಿ ಕೊಂದಿದ್ದರು. ಕೇಶುಭಾಯ್ ಪಟೇಲ್ ಬೆಂಬಲಿಗರಾಗಿದ್ದ ಪಾಂಡ್ಯ, ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕಟ್ಟಾ ವಿರೋಧಿಯಾಗಿದ್ದರು. ಇದೇ ಕಾರಣಕ್ಕೆ ಅವರಿಗೆ 2002ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿರಲಿಲ್ಲ ಮತ್ತು ಬೆದರಿಕೆಗಳು ಇದ್ದ ಹೊರತಾಗಿಯೂ ಸೂಕ್ತ ಭದ್ರತೆ ನೀಡಿರಲಿಲ್ಲ ಎಂದು ಹೇಳಲಾಗಿತ್ತು.

ವಾಗ್ದಾಳಿ ಮುಂದುವರಿಸಿದ ತಿವಾರಿ, ಬಿಜೆಪಿಯು ಈ ವಿಚಾರದಲ್ಲಿ ದ್ವಿಮುಖ ನೀತಿಯನ್ನು ಪ್ರದರ್ಶಿಸುತ್ತಿದೆ; ಸುಪ್ರೀಂ ಕೋರ್ಟಿನಿಂದ ಆಧುನಿಕ ನೀರೋ ಎಂದು ಶ್ಲಾಘನೆಗೊಳಗಾಗಿದ್ದ ಆರ್‌ಟಿಐ ಕಾರ್ಯಕರ್ತ ಅಮಿತ್ ಜೇತ್ವಾ ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರಕಾರದ ಮೇಲೆ ನನಗೆ ನಂಬಿಕೆಯಿಲ್ಲ, ಸಿಬಿಐಗೆ ಹಸ್ತಾಂತರಿಸಿ ಎಂದು ಅವರ ತಂದೆ ಹೇಳುತ್ತಿದ್ದಾರೆ. ಬಿಜೆಪಿ ಯಾಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.

ಗಿರ್ ಅರಣ್ಯ ಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಜೇತ್ವಾ ಅವರನ್ನು ಹತ್ಯೆ ಮಾಡಲು ಬಿಜೆಪಿಯ ಜುನಗಢ್ ಸಂಸದ ಸುಪಾರಿ ಕೊಟ್ಟಿದ್ದರೆಂಬ ಆರೋಪಗಳಿವೆ. ಸಂಸದ ದಿನೇಶ್ ಸೋಲಂಕಿಯವರು ತಲೆ ಮರೆಸಿಕೊಂಡಿದ್ದಾರೋ ಅಥವಾ ಸಂಸತ್ ಕಲಾಪಕ್ಕೆ ಹಾಜರಾಗುತ್ತಿದ್ದಾರೋ ನನಗೆ ತಿಳಿದಿಲ್ಲ. ಇದಕ್ಕೆಲ್ಲ ಬಿಜೆಪಿಯೇ ಉತ್ತರಿಸಬೇಕಿದೆ ಎಂದರು.

ಅದೇ ಹೊತ್ತಿಗೆ ಅಕ್ರಮ ಗಣಿಗಾರಿಕೆ ವಿಚಾರದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿವಾರಿಯವರು ಹೋಲಿಕೆ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ತಡೆಯುವುದು, ಪರಿಸರ ರಕ್ಷಿಸುವುದು ಮತ್ತು ಬುಡಕಟ್ಟು ಜನರ ಜೀವನ ವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ವೇದಾಂತ ಕಂಪನಿಗೆ ಯುಪಿಎ ಸರಕಾರವು ಪರಿಸರ ಪರವಾನಗಿ ತಿರಸ್ಕರಿಸಿದೆ. ಆದರೆ ಬಿಜೆಪಿಯು ಅಕ್ರಮ ಗಣಿಗಾರಿಕೆಯ ರೂವಾರಿಯನ್ನು ಕರ್ನಾಟಕದ ಸಚಿವರನ್ನಾಗಿಸಿದೆ ಎಂದರು.

ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧವೂ ತಿವಾರಿ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಬಿಜೆಪಿ ಸಚಿವರಿಗೆ ಕ್ಲೀನ್ ಚಿಟ್ ನೀಡುವ ನಿಟ್ಟಿನಲ್ಲಿ ಸಂಸತ್ ಅಧಿವೇಶನದ ನಡುವೆಯೂ ಸುಷ್ಮಾ ಬಳ್ಳಾರಿಗೆ ಹೋದರು ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ