ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿರುವ ಹೇಯಾತಿಹೇಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಕಾನೂನು ಪಾಲಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ನಿಮಗೆ ಜೀವಾವಧಿ ಶಿಕ್ಷೆಯನ್ನು ಯಾಕೆ ನೀಡಬಾರದು ಎಂದು ಪ್ರಶ್ನಿಸಿದೆ.
ಓರ್ವ ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಲು ನಿಮಗೆ ಹೇಗೆ ತಾನೇ ಮನಸ್ಸು ಬಂತು? ಇದೊಂದು ಕ್ರೂರ ಕೃತ್ಯ ಎಂಬುದರಲ್ಲಿ ಸಂಶಯವೇ ಇಲ್ಲ. ಅತಿರೇಕಕ್ಕೂ ಒಂದು ಮಿತಿಯಿದೆ. ಕನಿಷ್ಠ ನಾಗರಿಕ ವರ್ತನೆಯನ್ನಾದರೂ ತೋರಿಸಬೇಕಿತ್ತು ಎಂದು ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ಟಿ.ಎಸ್. ಠಾಕೂರ್ ಅವರ ಪೀಠವು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಪೊಲೀಸರು ಸೇರಿಕೊಂಡು ಆತನ ಮರ್ಮಾಂಗವನ್ನು ಕತ್ತರಿಸಿದ್ದರು. ಈ ಮೂವರಿಗೆ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಸಿಬಿಐ, ಶಿಕ್ಷೆಯ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದು ಸುಪ್ರೀಂಗೆ ಮನವಿ ಮಾಡಿತ್ತು.
ರಾಜಸ್ತಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆಯಲ್ಲಿ ದೋಷಿ ಎಂದು ಹೈಕೋರ್ಟ್‌ನಿಂದ ತೀರ್ಪು ಪಡೆದುಕೊಂಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಕಿಶೋರ್ ಸಿಂಗ್, ತನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ; ಹಾಗಾಗಿ ಖುಲಾಸೆಗೊಳಿಸಬೇಕು ಎಂಬ ಆತನ ಮನವಿಯನ್ನು ಅಪೆಕ್ಸ್ ತಳ್ಳಿ ಹಾಕಿದೆ.
ನೀವೆಲ್ಲರೂ ಪೊಲೀಸರು. ಓರ್ವ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತಂದು ನೀವು ಆತನ ಮರ್ಮಾಂಗವನ್ನು ಕತ್ತರಿಸಿದ್ದೀರಿ. ನಿಮ್ಮಂತಹ ಪೊಲೀಸರ ವಿರುದ್ಧ ಯಾರಾದರೂ ಸ್ವತಂತ್ರ ಸಾಕ್ಷ್ಯ ನುಡಿಯಬೇಕು ಎಂದು ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ನ್ಯಾಯಪೀಠವು ಆರೋಪಿಗಳಲ್ಲಿ ಪ್ರಶ್ನಿಸಿತು.
ಅಲ್ಲದೆ ಇಂತಹ ಕ್ರೂರ ಕೃತ್ಯವನ್ನೆಸಗಿರುವ ಪೊಲೀಸರನ್ನು ಶಿಕ್ಷೆಯಿಂದ ಪಾರು ಮಾಡುವುದು ಸಾಧ್ಯವಿಲ್ಲ ಎಂದು ಕೋರ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಿತು.
ಪೊಲೀಸ್ ಸಿಬ್ಬಂದಿಯಾಗಿರುವ ನೀವು ಇಂತಹ ಕೃತ್ಯವನ್ನು ಮಾಡಲೇಬಾರದಿತ್ತು. ಇಂದು ನೀವು ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಿದ್ದೀರಿ, ನಾಳೆ ಇನ್ನೊಬ್ಬನ ತಲೆಯನ್ನೇ ಕತ್ತರಿಸುತ್ತೀರಿ. ಹೀಗೆ ಬಿಟ್ಟರೆ ಏನೂ ಮಾಡಬಹುದು. ಹಾಗಾಗಿ ಇಂತಹ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಶಿಕ್ಷೆಯನ್ನು ನೀಡುವ ಅಗತ್ಯವಿದೆ ಎಂದಿತು.
ಶಿಕ್ಷೆ ಹೆಚ್ಚು ಮಾಡಬೇಕೆಂಬ ಸಿಬಿಐ ಮನವಿಗೆ ಪ್ರತಿ ಮನವಿಯನ್ನು ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಪೊಲೀಸರಿಗೆ ನ್ಯಾಯಾಲಯವು ಸೂಚನೆ ನೀಡಿದೆ.
ಅಕ್ರಮ ಸಂಬಂಧಕ್ಕೆ ಶಿಕ್ಷೆ... ಸೋಹನ್ ಸಿಂಗ್, ಸುಮೇರ್ ದಾನ್ ಮತ್ತು ಕಿಶೋರ್ ಸಿಂಗ್ ಎಂಬ ಮೂವರು ಪೊಲೀಸರು 1994ರಲ್ಲಿ ಜುಗತ್ ರಾಮ್ ಎಂಬ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡಿ ಮರ್ಮಾಂಗವನ್ನು ಕತ್ತರಿಸಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ರಾಮ್, ತನ್ನ ಬಾಸ್ ಭೈರವ್ ಸಿಂಗ್‌ನ ಪತ್ನಿ ಮತ್ತು ಮಗಳ ಜತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪದ ಮೇಲೆ ಉದ್ಯಮಿಯ ಆಮಿಷದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಉದ್ಯಮಿಯ ಎದುರಲ್ಲೇ ಈ ಕೃತ್ಯವನ್ನು ಪೊಲೀಸರು ನಡೆಸಿದ್ದರು.
ತನ್ನ ಉದ್ಯೋಗದಾತನ ಪತ್ನಿ ಮತ್ತು ಪುತ್ರಿಯ ಜತೆ ಸಂಬಂಧ ಹೊಂದಿರುವುದನ್ನು ವಿಚಾರಣೆ ಸಂದರ್ಭದಲ್ಲಿ ಬಲಿಪಶು ಒಪ್ಪಿಕೊಂಡಿದ್ದ. ಈ ಸಂಬಂಧ ವಿಚಾರಣೆ ನಡೆಸಿದ್ದ ಕೆಳಗಿನ ನ್ಯಾಯಾಲಯವು ಮೂವರು ಪೊಲೀಸರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪ್ರಕರಣ ಬಳಿಕ ರಾಜಸ್ತಾನ ಹೈಕೋರ್ಟ್ ತಲುಪಿತ್ತು. ಇಲ್ಲಿ ಸುಮೇರ್ ದಾನ್ ಮತ್ತು ಸೋಹನ್ ಸಿಂಗ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದ್ದರೆ, ಕಿಶೋರ್ ಸಿಂಗ್ ಶಿಕ್ಷೆಯನ್ನು ನಾಲ್ಕು ವರ್ಷಗಳಿಗೆ ಇಳಿಸಲಾಗಿತ್ತು.
ಇದರಿಂದ ಅಸಮಾಧಾನಗೊಂಡಿದ್ದ ಸಿಬಿಐ, ಮೂವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಮೇಲ್ಮನವಿ ಸಲ್ಲಿಸಿದೆ.