ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 100ಕ್ಕೂ ಹೆಚ್ಚು ಸಂಸದರು ದೇವರಂತೆ ಸುಮ್ಮನಿದ್ದರು!
(Member of Parliament | Monsoon session | Lok Sabha | Rajya Sabha)
ಕೈ ತುಂಬಾ ಸಂಬಳ ಬೇಕು, ಅದು ಯಾಕೆ ಎಂದು ಪ್ರಶ್ನಿಸಬಾರದು. ಇಷ್ಟಾದರೂ ಕೋಟಿಗಟ್ಟಲೆ ವ್ಯಯ ಮಾಡಿ ಕಾನೂನು ರೂಪಿಸಲು, ದೇಶದ ಸಮಸ್ಯೆಗಳನ್ನು ಪರಿಹರಿಸಲು ನಡೆಸಲಾಗುವ ಅಧಿವೇಶನದಲ್ಲಿ ನಾವೇ ಆರಿಸಿದ ಜನಪ್ರತಿನಿಧಿಗಳೆಂಬ ಸಂಸದರು ಬಾಯಿ ಬಿಡೋದೇ ಇಲ್ಲ.
ಸಾಕಷ್ಟು ಪ್ರಮುಖ ವಿದ್ಯಮಾನಗಳನ್ನು ಕಂಡ ಈ ಬಾರಿಯ ಮುಂಗಾರು ಅಧಿವೇಶನದಲ್ಲೂ ಇದು ಯಥಾ ಪ್ರಕಾರವಾಗಿ ಮುಂದುವರಿದಿದೆ. 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ.
ತಿಂಗಳಿಗೂ ಹೆಚ್ಚು ಕಾಲ ಸಂಸತ್ತಿನ ಎರಡೂ ಸದನಗಳಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯ 68 ಸದಸ್ಯರು ಹಾಗೂ ರಾಜ್ಯಸಭೆಯ 35 ಸದಸ್ಯರು ಯಾವುದೇ ಚರ್ಚೆ ಅಥವಾ ಪ್ರಶ್ನೆ ಅಥವಾ ಸದಸ್ಯರ ವೈಯಕ್ತಿಕ ಮಸೂದೆ -- ಈ ಯಾವುದೇ ವಿಚಾರಗಳಿಗೂ ಮುಂದಾಗಿಲ್ಲ ಎಂದು 'ಪಿಆರ್ಎಸ್ ಆಡಳಿತ ಅಧ್ಯಯನ' ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ.
ಸಚಿವರುಗಳು, ಉಭಯ ಸದನಗಳ ಸ್ಪೀಕರ್-ಉಪ ಸ್ಪೀಕರುಗಳನ್ನು ಹೊರತುಪಡಿಸಿ ಲೋಕಸಭೆಯ 479 ಹಾಗೂ ರಾಜ್ಯಸಭೆಯ 229 ಸದಸ್ಯರಲ್ಲಿ ದೇವರಂತೆ ಸುಮ್ಮನೆ ಕುಳಿತವರ ಪ್ರಮಾಣ ಶೇ.14.
ಅತೀ ಹೆಚ್ಚು ಚರ್ಚೆಗಳಲ್ಲಿ ಪಾಲ್ಗೊಂಡ ಸದಸ್ಯರಲ್ಲಿ ಸಮಾಜವಾದಿ ಪಕ್ಷದ ಶೈಲೇಂದ್ರ ಕುಮಾರ್ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ 117 ಹಾಗೂ ರಾಜ್ಯಸಭೆಯಲ್ಲಿ 79 ಸದಸ್ಯರು ಯಾವುದೇ ಪ್ರಶ್ನೆಯನ್ನು ಕೇಳಿಲ್ಲ.
ಸದನದಲ್ಲಿ ಪಾಲ್ಗೊಂಡ ವಿಚಾರಕ್ಕೆ ಬಂದಾಗ ಲೋಕಸಭೆಯ ಶೇ.41ರಷ್ಟು ಮಂದಿ ಶೇ.90ಕ್ಕಿಂತಲೂ ಹೆಚ್ಚು ಹಾಜರಾತಿ ಹೊಂದಿದ್ದಾರೆ. ರಾಜ್ಯಸಭೆಯ ಶೇ.43ರಷ್ಟು ಸದಸ್ಯರು ಶೇ.90ಕ್ಕಿಂತಲೂ ಹೆಚ್ಚು ಹಾಜರಾತಿ ದಾಖಲಿಸಿದ್ದಾರೆ.
ಅದೇ ಹೊತ್ತಿಗೆ ಸಾಮಾನ್ಯವಾಗಿ ದಿನಪೂರ್ತಿ ನಡೆಯುವ ಕಲಾಪದಲ್ಲಿ ಸಂಸದರು ಎಷ್ಟು ಹೊತ್ತು ಭಾಗವಹಿಸುತ್ತಾರೆ ಎಂಬ ವಿವರಗಳು ಲಭ್ಯವಾಗಿಲ್ಲ.
ಈ ವರ್ಷ ನಡೆಯಬೇಕಾಗಿದ್ದ 138 ಗಂಟೆಗಳ ಲೋಕಸಭಾ ಕಲಾಪದಲ್ಲಿ ಸಾಧ್ಯವಾಗಿರುವುದು 116 ಗಂಟೆಗಳು. ಅಂದರೆ ಸಾಕಷ್ಟು ಅಡ್ಡಿ ಆತಂಕಗಳ ನಡುವೆಯೂ ಶೇ.84ರಷ್ಟು ಸಮಯದ ಸದುಪಯೋಗ ನಡೆದಿದೆ.
ಸಂಸತ್ತಿನ ಕೆಳಮನೆಯ ಕಲಾಪಕ್ಕೆ ಅತಿ ಹೆಚ್ಚು ಅಡ್ಡಿಯುಂಟಾಗಿರುವುದು ಪ್ರಶ್ನೋತ್ತರ ವೇಳೆಯಲ್ಲಿ. ಯೋಜಿತ 23 ಗಂಟೆಗಳ ಪ್ರಶ್ನೋತ್ತರ ವೇಳೆಯಲ್ಲಿ 11 ಗಂಟೆ ಅಥವಾ ಶೇ.47ರಷ್ಟು ಸಮಯ ಮಾತ್ರ ಬಳಕೆಯಾಗಿದೆ.
ರಾಜ್ಯಸಭೆಯಲ್ಲಿ 115 ಗಂಟೆಗಳ ಯೋಜಿತ ಕಲಾಪದಲ್ಲಿ 104 ಗಂಟೆಗಳು ಫಲಪ್ರದವಾಗಿವೆ. 23 ಗಂಟೆಗಳ ಯೋಜಿತ ಪ್ರಶ್ನೋತ್ತರ ಅವಧಿಯಲ್ಲಿ ಬಳಕೆಯಾಗಿರುವುದು 13 ಗಂಟೆ. ಈ ವಿಚಾರದಲ್ಲಿ ರಾಜ್ಯಸಭೆಯು ಲೋಕಸಭೆಗಿಂತ ಹೆಚ್ಚು ಸಾಧನೆ ಮಾಡಿದೆ.