ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಸರಕಾರ - ಕಾಂಗ್ರೆಸ್ ನಡುವೆ ಒಮ್ಮತವಿಲ್ಲ: ಬಿಜೆಪಿ (UPA leaders | BJP | Sushma Swaraj | Arun Jaitley)
Bookmark and Share Feedback Print
 
ಪರಸ್ಪರ ಭಿನ್ನಾಭಿಪ್ರಾಯಗಳಿಂದ ಬಳಲುತ್ತಿರುವ ಸಚಿವಾಲಯಗಳು ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಬಿಜೆಪಿ, ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ನಾಯಕರು ಸರಕಾರದಲ್ಲಿ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಸರಕಾರದ ನಾಯಕತ್ವವು ಆಡಳಿತದಲ್ಲಿ ಹಿಡಿತವನ್ನು ಕಳೆದುಕೊಳ್ಳುತ್ತಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದರೆ, ಅತ್ತ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿಯವರು ಈಗಷ್ಟೇ ಮುಕ್ತಾಯ ಕಂಡಿರುವ ಮುಂಗಾರು ಅಧಿವೇಶನದಲ್ಲಿ ಹಲವು ಮಸೂದೆಗಳು ಮತ್ತು ನೀತಿಗಳ ಸಂಬಂಧ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಸರಕಾರದ ನಡುವೆ ಹಲವು ಭಿನ್ನಾಭಿಪ್ರಾಯಗಳಿರುವುದನ್ನು ಉದಾಹರಿಸಿದ್ದಾರೆ.

ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಹಲವು ಸಚಿವಾಲಯಗಳ ನಡುವೆ ಸಹಕಾರಗಳೇ ಕಾಣಿಸುತ್ತಿಲ್ಲ. ಸಚಿವರು ಮತ್ತು ಕಾಂಗ್ರೆಸ್ ಸಂಸದರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಅದು ಹೆಚ್ಚುತ್ತಿದೆ ಎಂದು ಜೇಟ್ಲಿ ವಿಶ್ಲೇಷಿಸಿದ್ದಾರೆ.

ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರ ಮಹತ್ವಾಕಾಂಕ್ಷೆಯ ಶೈಕ್ಷಣಿಕ ಮಸೂದೆಯ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕೇಶವ ರಾವ್ ಸೇರಿದಂತೆ ಪಕ್ಷದವರಿಂದಲೇ ಪ್ರಬಲ ವಿರೋಧ ಕಂಡು ಬಂದಿರುವುದನ್ನು ಉದಾಹರಿಸಿದರು.

ಅದೇ ಹೊತ್ತಿಗೆ ಬಿಜೆಪಿ ಪ್ರತಿಪಕ್ಷವಾಗಿ ಅಧಿವೇಶನದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದೆ ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ. ತನ್ನ ಕಳವಳಗಳನ್ನು ಮುಂದಿಡುತ್ತಾ ಮಹತ್ವದ ಮಸೂದೆಗಳನ್ನು ಸರಕಾರ ಅಂಗೀಕರಿಸಲು ಪ್ರತಿಪಕ್ಷವಾಗಿ ಸಹಕರಿಸಿರುವುದಾಗಿ ಸುಷ್ಮಾ ಸಮರ್ಥಿಸಿಕೊಂಡಿದ್ದಾರೆ.

ಆದರೆ ಸರಕಾರಕ್ಕೆ ಎಲ್ಲಾ ಮಸೂದೆಗಳನ್ನು ಅಂಗೀಕಾರ ಮಾಡಿಸಿಕೊಳ್ಳುವುದು ಸಾಧ್ಯವಾಗಲಿಲ್ಲ ಎಂದು ಮುಂದಕ್ಕೆ ಹಾಕಲ್ಪಟ್ಟ ಕೆಲವು ಮಸೂದೆಗಳನ್ನು ಉಲ್ಲೇಖಿಸುತ್ತಾ ಪ್ರತಿಪಕ್ಷದ ನಾಯಕಿ ತಿಳಿಸಿದ್ದಾರೆ.

ಪ್ರತಿಪಕ್ಷ ಮತ್ತು ಕಾಂಗ್ರೆಸ್ ನಡುವೆ ಅಧಿವೇಶನದ ಸಂದರ್ಭದಲ್ಲಿ ಒಪ್ಪಂದ ನಡೆದಿತ್ತು ಎಂಬ ಆರೋಪಗಳಿಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ಈ ಡೀಲ್ ಎಂಬ ಪ್ರಕಾರವನ್ನೇ ನಾನು ವಿರೋಧಿಸುತ್ತೇನೆ. ಒಪ್ಪಂದವೆಂದ ಕೂಡಲೇ ಅದು ಸಂಪೂರ್ಣ ಅಧಿವೇಶನಕ್ಕೆ ಸಂಬಂಧಪಟ್ಟಿರುತ್ತದೆ, ಕೇವಲ ಒಂದು ಮಸೂದೆಗೆ ಮೀಸಲಾಗಿರುವುದಿಲ್ಲ. ಹಾಗಾಗಿ ಮಾಡಲಾಗಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪರಮಾಣು ಬಾಧ್ಯತಾ ಮಸೂದೆಯ ಕುರಿತ ಆರೋಪಗಳಿಗೆ ಸುಷ್ಮಾ ಸ್ಪಷ್ಟನೆ ನೀಡಿದರು.

ಜಮ್ಮು-ಕಾಶ್ಮೀರದ ಕುರಿತು ಸರಕಾರವು ಗಂಭೀರವಾಗಿ ವರ್ತಿಸಬೇಕು ಎಂದೂ ಬಿಜೆಪಿ ಸಲಹೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ