ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿರುಪತಿ ತಿಮ್ಮಪ್ಪ ದರ್ಶನ ಪಡೆದ ಪ್ರಧಾನ ಮಂತ್ರಿ ಸಿಂಗ್
(Manmohan Singh | Tirumala shrine | Tirupati | Lord Venkateswara)
ರಾಜಕೀಯ ಜಂಜಡಗಳ ನಡುವೆ ವಿಶ್ವ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ತಿರುಮಲ ಸನ್ನಿಧಾನಕ್ಕೆ ಬುಧವಾರ ತೆರಳಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಪ್ರಾರ್ಥನೆ ಸಲ್ಲಿಸಿದ್ದಾರೆ.
ತಿರುಪತಿಗೆ ಪ್ರಧಾನಿ ಬರಲಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ತಿರುಪತಿ-ತಿರುಮಲದಲ್ಲಿ ಏರ್ಪಡಿಸಲಾಗಿತ್ತು. ಹಿರಿಯ ಪುರೋಹಿತರ ಮಂತ್ರ-ಘೋಷಾದಿಗಳ ನಡುವೆ ದೇವಳ ಪ್ರವೇಶಿಸಿದ ಸಿಂಗ್ ಸಾಂಪ್ರದಾಯಿಕ ಸ್ವಾಗತವನ್ನು ಪಡೆದರು.
ಗರ್ಭಗುಡಿಯಲ್ಲಿನ ತಿಮ್ಮಪ್ಪನ ಮೂರ್ತಿಯ ಎದುರುಗಡೆ ಸುಮಾರು ಹತ್ತು ನಿಮಿಷಗಳಷ್ಟು ಕಾಲ ಪ್ರಧಾನ ಮಂತ್ರಿ ಸಿಂಗ್ ಪ್ರಾರ್ಥನೆ ಸಲ್ಲಿಸಿದರೆ, ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ತಿಮ್ಮಪ್ಪನ ದರ್ಶನದ ನಂತರ ಸಿಂಗ್ ಗರ್ಭಗುಡಿಯ ಹೊರಭಾಗದಲ್ಲಿರುವ ಹುಂಡಿಗೂ ಇಷ್ಟಾನುಸಾರ ಕೊಡುಗೆಯನ್ನು ಅರ್ಪಿಸಿದರು.
ದೇವಳದೊಳಗಿನ ಶ್ರೀ ರಂಗನಾಯಕ ಮಂಟಪಂನಲ್ಲಿ ಪ್ರಾರ್ಥನೆ ಸಿಂಗ್ ಸಲ್ಲಿಸಿದರು. ದೇವರ ಮಂತ್ರ ಮತ್ತು ಸ್ತೋತ್ರಗಳನ್ನು ಸ್ತುತಿಸುತ್ತಿದ್ದ ಪುರೋಹಿತರು ಪ್ರಧಾನಿಯವರಿಗೆ ಹರಸಿದ್ದಾರೆ. ನಂತರ ಆಂಧ್ರ ಧಾರ್ಮಿಕ ದತ್ತಿ ಸಚಿವ ಜಿ. ವೆಂಕಟ ರೆಡ್ಡಿಯವರು ಶಾಲು ಹೊದೆಸಿ, ಪವಿತ್ರ ಲಡ್ಡು ಮತ್ತು ತೀರ್ಥವನ್ನು ನೀಡಿದರು.
2000 ವರ್ಷಗಳಷ್ಟು ಪುರಾತನವಾದ ಬೆಟ್ಟದ ತುದಿಯಲ್ಲಿರುವ ದೇವಳಕ್ಕೆ ಪ್ರಧಾನಿ ಸಿಂಗ್ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2005ರ ಸೆಪ್ಟೆಂಬರ್ 25ರಂದು ಅವರು ತಿಮ್ಮಪ್ಪನ ದರ್ಶನ ಪಡೆದಿದ್ದರು.
ಇಲ್ಲಿನ ರೇಣಿಗುಂಟಾ ಸಮೀಪ ತಿರುಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಪ್ರಧಾನಿಯವರು ತೆರಳಿದ್ದರು.
ಈ ವಿಮಾನ ನಿಲ್ದಾಣಕ್ಕಾಗಿ 400 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರಾಜ್ಯ ಸರಕಾರವು 290 ಎಕರೆಯನ್ನು ಭಾರತೀಯ ವೈಮಾನಿಕ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.
ಪ್ರಾಧಿಕಾರವು ಇಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಸಿಲು 300 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಒಂದೆರಡು ವರ್ಷದೊಳಗೆ ವಿಮಾನ ನಿಲ್ದಾಣ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.