ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಹಿಂದೂಗಳಿಗೋ, ಮುಸ್ಲಿಮರಿಗೋ?; ದಿನಗಣನೆ (Ayodhya | Babri Masjid | Ram Janmabhoomi | VHP)
Bookmark and Share Feedback Print
 
ಸಮಸ್ತ ಹಿಂದೂಗಳ ಶ್ರದ್ಧಾಕೇಂದ್ರ ಅಯೋಧ್ಯೆಯ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಒಡೆತನದ ಕುರಿತ ಮಹತ್ವದ ತೀರ್ಪಿಗೆ ದಿನಗಣನೆ ಆರಂಭವಾಗಿದೆ. ಪ್ರಕರಣದ ವಿಚಾರಣೆಯನ್ನು ಮುಗಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು ಇದೇ ತಿಂಗಳ ಹದಿನೇಳರಂದು ಹಕ್ಕು ಸ್ಥಾಪನೆ ಕುರಿತು ಸ್ಪಷ್ಟ ತೀರ್ಮಾನವನ್ನು ಪ್ರಕಟಿಸಲಿರುವುದರಿಂದ ರಾಜಕಾರಣಿಗಳು ಸೇರಿದಂತೆ ಜನತೆಯಲ್ಲಿ ಅಪಾರ ಕುತೂಹಲ ಮನೆ ಮಾಡಿದೆ.

ಇದರ ಜತೆಗೆ ಕಾನೂನು ಸುವ್ಯವಸ್ಥೆ ಹದಗೆಡುವ ಅಪಾಯವೂ ಸರಕಾರಗಳಿಗೆ ಸವಾಲಾಗಿ ಪರಿಗಣಿಸಿದೆ. ಪ್ರಮುಖವಾಗಿ ಇದರ ಬಾಧೆಯಿರುವುದು ವಿವಾದಿತ ಸ್ಥಳವಿರುವ ಉತ್ತರ ಪ್ರದೇಶದಲ್ಲಿ. ಉಳಿದಂತೆ ಇತರ ರಾಜ್ಯಗಳಲ್ಲಿ ಕೂಡ ತೀರ್ಪಿನ ಪರಿಣಾಮಗಳು ಕಾಣುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೇಂದ್ರವು ಭದ್ರತೆಗೆ ಹೆಚ್ಚಿನ ಒತ್ತು ನೀಡುವಲ್ಲಿ ಮುತುವರ್ಜಿ ವಹಿಸುತ್ತಿದೆ.

ಹಿಂದೂ ಮತ್ತು ಮುಸ್ಲಿಮರ ನಡುವಿನ ವಿವಾದವಾಗಿರುವ ಕಾರಣ ನ್ಯಾಯಾಲಯವು ಯಾವ ತೀರ್ಪು ನೀಡಿದರೂ ತೀಕ್ಷ್ಣ ಪ್ರತಿಕ್ರಿಯೆ ಅಥವಾ ಕೋಮು ಪ್ರಚೋದಿತ ಘಟನೆಗಳು ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಭದ್ರತಾ ಪಡೆಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಕಟ್ಟುನಿಟ್ಟಿನ ಸೂಚನೆ ನೀಡಿದೆ.
WD

ಅಯೋಧ್ಯೆಯಲ್ಲಿ ನಿಷೇಧಾಜ್ಞೆ...
ಅಲಹಾಬಾದ್ ತೀರ್ಪಿನ ಮೇಲೆ ಪರಿಣಾಮ ಬೀರುವ ಅಥವಾ ತೀರ್ಪಿನ ನಂತರ ಭುಗಿಲೇಳುವ ಸಂಭಾವ್ಯ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರವು ಅಯೋಧ್ಯೆಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಆಗಸ್ಟ್ 30ರ ಸೋಮವಾರದಿಂದಲೇ ಜಾರಿಗೆ ತಂದಿದೆ.

ಅಲ್ಲದೆ ತನಗೆ 50,000 ಅರೆ ಮಿಲಿಟರಿ ಪಡೆಯನ್ನು ಒದಗಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದೆ. ಈ ಸಂಬಂಧ ಈಗಾಗಲೇ ರಕ್ಷಣಾ ಸಚಿವ ಎ.ಕೆ. ಆಂಟನಿ, ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ.

ಮಂದಿರ ಅಯೋಧ್ಯೆಯಲ್ಲೇ: ವಿಎಚ್‌ಪಿ
ನ್ಯಾಯಾಲಯ ಯಾವ ತೀರ್ಪನ್ನು ನೀಡಿದರೂ ರಾಮ ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕು ಎಂಬ ನಿಲುವಿನಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಮತ್ತು ವಿಶ್ವ ಹಿಂದೂ ಪರಿಷತ್ ವರಿಷ್ಠ ಅಶೋಕ್ ಸಿಂಘಾಲ್ ಘೋಷಿಸಿದ್ದಾರೆ.

ವೈಭವೋಪೇತ ರಾಮ ಮಂದಿರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಮಜನ್ಮಭೂಮಿ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದಿರುವ ಸಿಂಘಾಲ್, ಈ ಕುರಿತು ಶಾಂತಿಯುತ ಪರಿಹಾರಕ್ಕಿರುವ ಮಾರ್ಗ ಕಾನೂನು ರಚನೆ ಮಾತ್ರ ಎಂದಿದ್ದಾರೆ.

ಪ್ರಸಕ್ತ ನಾಶವಾಗಿರುವ ಬಾಬ್ರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರ ಕಟ್ಟಲು ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಗೊಳಿಸಬೇಕು ಎಂದು ಸಂಸತ್ ಶಾಸನವೊಂದನ್ನು ಅಂಗೀಕರಿಸಿದರೆ ಸಮಸ್ಯೆಗಳು ಸೌಹಾರ್ದಯುತವಾಗಿ ಪರಿಹಾರ ಕಾಣುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಎಚ್ಚರಿಕೆ ನಡೆ...
ಅಯೋಧ್ಯೆ ಕುರಿತ ತೀರ್ಪು ಹೊರ ಬೀಳಲು ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಎರಡು ದಶಕಗಳ ಹಿಂದೆ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಮೂಲಕ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದ್ದ ಬಿಜೆಪಿ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಿದೆ.

ತೀರ್ಪಿನ ಕುರಿತು ಯಾವುದೇ ವಿವಾದಿತ ಹೇಳಿಕೆ ನೀಡದಂತೆ ಸ್ವತಃ ಎಲ್.ಕೆ. ಅಡ್ವಾಣಿಯವರು ಫರ್ಮಾನು ಹೊರಡಿಸಿದ್ದಾರೆ.

ಅಯೋಧ್ಯೆಯ ಕುರಿತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಹೇಳಿಕೆಯನ್ನು ಬಿಜೆಪಿ ಸಂಸದರು ನೀಡಬಾರದು. ಒಂದು ರಾಷ್ಟ್ರೀಯ ಪಕ್ಷವಾಗಿ ನಾವು ತೀರ್ಪು ಹೊರ ಬರುವ ಹೊತ್ತಿನಲ್ಲಿ ಎಚ್ಚರಿಕೆಯ ಹೇಳಿಕೆಗಳನ್ನು ನೀಡಬೇಕು ಎಂದು ಅಡ್ವಾಣಿಯವರು ಸೂಚಿಸಿದ್ದಾರೆ ಎಂದು ಬಿಜೆಪಿ ನಾಯಕ ಎಸ್.ಎಸ್. ಅಹ್ಲುವಾಲಿಯಾ ತಿಳಿಸಿದ್ದಾರೆ.

'ನೀವು ನಿಮ್ಮ ಪ್ರಶ್ನೆಯನ್ನು ಕೇಳಿದ್ದೀರಿ. ಅದಕ್ಕೆ ಉತ್ತರಿಸುವುದು ನನ್ನ ಹಕ್ಕು. ನನ್ನ ಉತ್ತರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ..' ಹೀಗೆಂದು ಹೇಳಿರುವುದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ. ತೀರ್ಪು ಬರಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆಗಾಗಿ ಪತ್ರಕರ್ತರು ಸುತ್ತುವರಿದಾಗ ಹೀಗೆಂದಿದ್ದಾರೆ.
PTI

ರಾಜಕೀಯ ಬೇಳೆ ಸಾಧ್ಯತೆ...
ನ್ಯಾಯಾಲಯದ ತೀರ್ಪು ಯಾವುದೇ ಆಗಿದ್ದರೂ ಸಹ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದು ಖಚಿತ. ಈ ನಿಟ್ಟಿನಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಸೇರಿದಂತೆ ಹೆಚ್ಚಿನ ಪಕ್ಷಗಳು ತೀವ್ರ ಕುತೂಹಲದಿಂದ ಕಾಯುತ್ತಿವೆ.

ಹಿಂದೂಗಳ ಓಲೈಕೆ ಮಾಡುವ ಮೂಲಕ ತನ್ನ ಮೂಲಮಂತ್ರವನ್ನು ಬಿಜೆಪಿ ಗುಟ್ಟಾಗಿ ಪಠಿಸುತ್ತಿದ್ದರೆ, ಅತ್ತ ಕಾಂಗ್ರೆಸ್ ಮತ್ತಿತರ ಪಕ್ಷಗಳು ಮುಸ್ಲಿಮರ ಒಲವು ಗಿಟ್ಟಿಸಲು ಏನೇನು ಅಗತ್ಯವಿದೆ ಎಂಬುದನ್ನು ಯೋಚಿಸುತ್ತಿವೆ.

ಈ ವಿಚಾರದಲ್ಲಿ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಕೂಡ ಧನಾತ್ಮಕ ಹೇಳಿಕೆಯೊಂದನ್ನು ನೀಡಿದೆ ಎಂದು ಪತ್ರಿಕಾ ವರದಿಗಳು ಹೇಳಿವೆ. ಪವಿತ್ರ ಕುರಾನ್‌ನಲ್ಲಿ ಹೇಳಿರುವ ಪ್ರಕಾರ ಹಣ ಕೊಟ್ಟು ಖರೀದಿಸದ ಜಾಗದಲ್ಲಿ ಯಾವುದೇ ಮಸೀದಿಯನ್ನು ನಿರ್ಮಿಸಬಾರದು ಎಂಬ ಉಲ್ಲೇಖವಿರುವುದನ್ನು ಸಮಿತಿ ಒಪ್ಪಿಕೊಂಡಿದೆ ಎಂದು ಹೇಳಲಾಗಿದೆ.

ನೂರಾರು ವರ್ಷಗಳ ಕೇಸು...
ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಿಸಬೇಕೆಂಬುದು ಹಿಂದೂ ಜನಕೋಟಿಯ ನೂರಾರು ವರ್ಷಗಳ ಆಗ್ರಹ. ಇದಕ್ಕಾಗಿ ನೂರಕ್ಕೂ ಹೆಚ್ಚು ವರ್ಷಗಳಿಂದ ಕಾನೂನು, ಮನವಿ, ಹೋರಾಟ, ಪ್ರತಿಭಟನೆಗಳು ನಡೆಯುತ್ತಾ ಬಂದಿವೆ.

ಈ ಹಿಂದೆ ಇಲ್ಲಿ ರಾಮಮಂದಿರ ಇತ್ತು ಎನ್ನುವುದಕ್ಕೆ ಸ್ವತಃ ಪುರಾತತ್ವ ಇಲಾಖೆಯೇ ಉತ್ಖನನದ ಮೂಲಕ ಪುರಾವೆಗಳನ್ನು ಒದಗಿಸಿದೆ. ಕೇವಲ ಹಿಂದೂಗಳ ಅಷ್ಟೇ ಅಲ್ಲದೆ ರಾಷ್ಟ್ರೀಯ ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿರುವ ರಾಮ ಮಂದಿರದ ಕುರಿತು ನ್ಯಾಯಾಲಯ ಯಾವ ತೀರ್ಪನ್ನು ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.

ಸೆಪ್ಟೆಂಬರ್ 17ಕ್ಕೆ ತೀರ್ಪು ಹೊರಬೀಳಲಿದೆ ಎಂದು ಹೇಳಲಾಗಿದೆಯಾದರೂ, ಇದು ಖಚಿತವಲ್ಲ. ಅಕ್ಟೋಬರ್ ಮೊದಲ ವಾರಕ್ಕಿಂತ ಮೊದಲು ಯಾವುದೇ ದಿನ ಕೋರ್ಟ್ ತನ್ನ ಅಂತಿಮ ನಿರ್ಣಯವನ್ನು ಪ್ರಕಟಿಸಬಹುದು.

ರಾಮನೀಗ ಟೆಂಟ್‌ನಲ್ಲಿದ್ದಾನೆ...
ಇತಿಹಾಸದ ಪ್ರಕಾರ 12ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕಟ್ಟಲಾಗಿತ್ತು. ರಾಮ ಜನ್ಮಭೂಮಿಯಲ್ಲಿದ್ದ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿ ಆ ಜಾಗದಲ್ಲಿ 1528ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಕಟ್ಟಿದ್ದ ಬಾಬ್ರಿ ಮಸೀದಿಯನ್ನು 1992ರಲ್ಲಿ ಹಿಂದೂ ಕರಸೇವಕರು ಉರುಳಿಸಿದ್ದರು.

ಕಳೆದ 20 ವರ್ಷಗಳಿಂದ ಟೆಂಟ್ ಮತ್ತು ಗೂಡಿನಂತಹ ಕಟ್ಟಡದಲ್ಲಿ ಶ್ರೀರಾಮನಿಗೆ ಪೂಜೆ ಮಾಡುತ್ತಾ ಬರಲಾಗುತ್ತಿದೆ. ನ್ಯಾಯಾಲಯದ ತೀರ್ಪು ಬರುವವರೆಗೆ ರಾಮ ಮಂದಿರ ನಿರ್ಮಾಣ ಸಾಧ್ಯವಿಲ್ಲ ಎನ್ನುವುದು ಹೌದಾದರೂ, ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಕೆತ್ತನೆಗಳೂ ಪೂರ್ಣಗೊಂಡಿದೆ. ಸೋಮನಾಥ ಮಂದಿರ ಪುನರ್ ನಿರ್ಮಾಣದ ಮಾದರಿಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಕನಸು ವಿಶ್ವ ಹಿಂದೂ ಪರಿಷತ್ತಿನಲ್ಲಿದೆ.

ಸುದೀರ್ಘ ವಿಚಾರಣೆ ಮುಗಿದಿದೆ...
1950ರಲ್ಲಿ ಗೋಪಾಲ್ ಸಿಂಗ್ ವಿಶಾರದ್ ಎಂಬವರು ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಅವಕಾಶಕ್ಕೆ ಸಂಬಂಧಪಟ್ಟಂತೆ ಮೊದಲ ಪ್ರಕರಣ ದಾಖಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿ ಅದೇ ವರ್ಷ ಪರಮಹಂಸ ರಾಮಚಂದ್ರ ದಾಸ್ ಎರಡನೇ ಪ್ರಕರಣ ದಾಖಲಿಸಿ, ನಂತರ ಹಿಂದಕ್ಕೆ ಪಡೆದುಕೊಂಡಿದ್ದರು.

ವಿವಾದಿತ ಪ್ರದೇಶವನ್ನು ಬಿಟ್ಟುಕೊಡುವಂತೆ ನಿರ್ದೇಶನ ನೀಡಬೇಕೆಂದು 1959ರಲ್ಲಿ ನಿರ್ಮೋಹಿ ಅಖಾಡಾ ಎಂಬ ಸಂಸ್ಥೆ ಮೂರನೇ ದಾವೆ ಹೂಡಿತ್ತು. ನಂತರ 1961ರಲ್ಲಿ ಡಿಕ್ಲರೇಶನ್ ಮತ್ತು ಒಡೆತನಕ್ಕಾಗಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ನಾಲ್ಕನೇ ಪ್ರಕರಣ ದಾಖಲಿಸಿತ್ತು.

ಡಿಕ್ಲರೇಶನ್ ಮತ್ತು ಒಡೆತನ ನೀಡಬೇಕೆಂದು 1989ರಲ್ಲಿ ಭಗವಾನ್ ಶ್ರೀ ರಾಮ್ ಲಾಲಾ ವಿರಾಜಮಾನ್ ಹೆಸರಿನಲ್ಲಿ ಐದನೇ ಪ್ರಕರಣ ದಾಖಲಾಗಿತ್ತು. ಈ ಒಟ್ಟಾರೆ ಐದು ಪ್ರಕರಣಗಳಲ್ಲಿ ಎರಡನೇ ಪ್ರಕರಣವೊಂದು ಮಾತ್ರ ಹಿಂದಕ್ಕೆ ಪಡೆಯಲ್ಪಟ್ಟಿರುವುದರಿಂದ ನಾಲ್ಕು ಪ್ರಕರಣಗಳು ಪ್ರಸಕ್ತ ಚಾಲ್ತಿಯಲ್ಲಿವೆ.

ಫೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿದ್ದ ಈ ನಾಲ್ಕೂ ಪ್ರಕರಣಗಳನ್ನು 1989ರಲ್ಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.

1995ರಲ್ಲಿ ರಾಮ ಜನ್ಮಭೂಮಿ ಪರ 35 ಹಾಗೂ ಬಾಬ್ರಿ ಮಸೀದಿ ಪರ 23 ಸಾಕ್ಷ್ಯಗಳನ್ನು ಹಾಜರುಪಡಿಸಲಾಗಿತ್ತು. ಒಟ್ಟಾರೆ ಸಾಕ್ಷ್ಯಗಳು 15,000 ಪುಟಗಳನ್ನೂ ಮೀರಿದ್ದವು. ಇವೆಲ್ಲ ಪ್ರಕರಣಗಳ ವಿಚಾರಣೆಯನ್ನೂ ನ್ಯಾಯಾಲಯ ಮುಗಿಸಿದ್ದು, ತೀರ್ಪು ನೀಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ