ಹೈದರಾಬಾದ್, ಗುರುವಾರ, 2 ಸೆಪ್ಟೆಂಬರ್ 2010( 12:01 IST )
ಕಾಂಗ್ರೆಸ್ ಹೈಕಮಾಂಡ್ ಕಟ್ಟಾಜ್ಞೆಯನ್ನು ಧಿಕ್ಕರಿಸಿ ಅವಸರದಿಂದ ರಾಜಕೀಯ ಮೈಲೇಜ್‌ಗೆ ಯತ್ನಿಸುತ್ತಿರುವ ಜಗನ್ ಮೋಹನ್ ರೆಡ್ಡಿ, ತನ್ನ ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರ ಸಾವಿಗೆ ವರ್ಷ ಸಂದಿರುವ ಹೊತ್ತಿನಲ್ಲಿ ಸರಿಸುಮಾರು 600 ಪ್ರತಿಮೆಗಳನ್ನು ಆಂಧ್ರಪ್ರದೇಶದಾದ್ಯಂತ ಅನಾವರಣಗೊಳಿಸಿದ್ದಾರೆ.
2009ರ ಸೆಪ್ಟೆಂಬರ್ 9ರಂದು ಕರ್ನೂಲ್ ಜಿಲ್ಲೆಯ ನಲ್ಲಮಲ ಬೆಟ್ಟದಲ್ಲಿ ಹೆಲಿಕಾಪ್ಟರ್ ಪತನಗೊಂಡು ದುರಂತ ಸಾವಿಗೀಡಾಗಿದ್ದ ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಅಗಲಿಕೆಗೆ ಇಂದು ಸರಿಯಾಗಿ ವರ್ಷ ತುಂಬಿದೆ.
PR
ವೈಎಸ್ಆರ್ ಗಳಿಸಿದ್ದ ರಾಜಕೀಯ ಔನ್ನತ್ಯವನ್ನು ಆತುರದಲ್ಲಿ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಟೀಕೆಗೊಳಗಾಗಿರುವ ಅವರ ಪುತ್ರ ಜಗನ್ ಹೈಕಮಾಂಡ್ ಫರ್ಮಾನುಗಳನ್ನು ಗಾಳಿಗೆ ತೂರಿ ತನ್ನ 'ಸಾಂತ್ವನ ಯಾತ್ರೆ'ಯನ್ನು (ಒದಾರ್ಪು ಯಾತ್ರಾ) ಮುಂದುವರಿಸಿದ್ದು, ಹೋದಲ್ಲೆಲ್ಲ ತಂದೆಯ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಕಾಂಗ್ರೆಸ್‌ಗೆ ಪರ್ಯಾಯ ಮಾರ್ಗ ಇಲ್ಲದಂತೆ ಮಾಡಲು ಯತ್ನಿಸುತ್ತಿದ್ದಾರೆ. ಇದು ಮುಖ್ಯಮಂತ್ರಿ ಗಾದಿಗೇರಲು ಅವರು ನಡೆಸುತ್ತಿರುವ ಅಪಘಾತ ವಲಯದ ಆತುರ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಯಾತ್ರೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಣ ತೊಟ್ಟಿದ್ದರೂ ಜಗನ್ ಮಣಿಯುತ್ತಿಲ್ಲ. ಆದರೂ ತಾನು ಸೆಪ್ಟೆಂಬರ್ ಮೂರರಂದು ಪ್ರಕಾಶಂ ಜಿಲ್ಲೆಯಲ್ಲಿ ಯಾತ್ರೆಗೆ ಮಂಗಳ ಹಾಡುವುದಾಗಿ ಅವರು ತಿಳಿಸಿದ್ದಾರೆ.
ವೈಎಸ್ಆರ್ ಸಾವಿನ ಆಘಾತದಿಂದ ಸುಮಾರು 700 ಮಂದಿ ಆತ್ಮಹತ್ಯೆ ಅಥವಾ ಹೃದಯಾಘಾತಗಳ ಮೂಲಕ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದರಲ್ಲಿ ಎಳ್ಳಷ್ಟೂ ಹುರುಳಿಲ್ಲ ಎನ್ನುವುದು ಸ್ವತಃ ಕಾಂಗ್ರೆಸ್ಸಿಗರದೇ ವಾದ. ತನ್ನ ಟೀವಿ ಮತ್ತು ಪತ್ರಿಕೆಗಳನ್ನು ಬಳಸಿಕೊಂಡು ಯಾವುದೋ ಕಾರಣಗಳಿಂದ ಸತ್ತವರನ್ನು ವೈಎಸ್ಆರ್ ದುರಂತಕ್ಕೆ ಸಂಬಂಧ ಕಲ್ಪಿಸಲಾಗಿತ್ತು ಎನ್ನಲಾಗುತ್ತಿದೆ.
ಪ್ರತಿಮೆ ರಾಜಕೀಯ... ಭಾರತದಲ್ಲಿ ಪ್ರತಿಮೆ ರಾಜಕೀಯವೇನೂ ಹೊಸತಲ್ಲ. ಈ ಪಟ್ಟಿಯಲ್ಲಿ ವೈಎಸ್ಆರ್ ಇತ್ತೀಚಿನ ಉದಾಹರಣೆಯಷ್ಟೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರು ಜೀವಂತವಾಗಿರುವಾಗಲೇ ತನ್ನ ಸಾವಿರಾರು ಪ್ರತಿಮೆಗಳನ್ನು ರಾಜ್ಯದಾದ್ಯಂತ ನಿಲ್ಲಿಸಿದ್ದಾರೆ. ತನ್ನ ರಾಜಕೀಯ ಗುರು ಕಾನ್ಶೀರಾಮ್ ಅವರನ್ನೂ ಜತೆಗೆ ಸೇರಿಸಿಕೊಂಡಿದ್ದಾರೆ.
ಇದೀಗ ಜಗನ್ ತನ್ನ ತಂದೆ ವೈಎಸ್ಆರ್ ಪ್ರತಿಮೆಗಳನ್ನು ರಾಜ್ಯದಾದ್ಯಂತ ನಿರ್ಮಿಸುವ ಪಣ ತೊಟ್ಟಿದ್ದಾರೆ. ಅದೇ ನಿಟ್ಟಿನಲ್ಲಿ 600ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿಯಾಗಿದೆ. ಇನ್ನೂ ಸಾಕಷ್ಟು ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಜಗನ್ ಆಪ್ತ ವಲಯ ಹೇಳುತ್ತಿದೆ.
ಆದರೆ ಇದಕ್ಕೆ ಮತದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿಮೆಯೊಂದಕ್ಕೆ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ಇದರ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ಒಬ್ಬರ ಪ್ರತಿಮೆ ಸ್ಥಾಪಿಸುವುದರಲ್ಲಿ ಯಾವ ತಪ್ಪೂ ಇಲ್ಲ, ಆದರೆ ಅದಕ್ಕೊಂದು ಮಿತಿಯಿರಬೇಕು. ಈ ರೀತಿಯ ಹುಚ್ಚಾಟಗಳಿರಬಾರದು. ಪ್ರತಿಮೆಗಳ ಬದಲು ಕಾಂಗ್ರೆಸ್ಸಿನ ವೈಎಸ್ಆರ್ ಅಭಿಮಾನಿಗಳು ಗಿಡಗಳನ್ನು ನೆಟ್ಟು ಮರವಾಗುವಂತೆ ನೋಡಿಕೊಳ್ಳಬಹುದಿತ್ತು. ವೈಎಸ್ಆರ್ ಸಾಧನೆಯನ್ನು ಸ್ಮರಿಸಿಕೊಳ್ಳಲು ಒಂದು ಲಕ್ಷವೋ ಅಥವಾ ಒಂದು ಕೋಟಿ ಗಿಡಗಳನ್ನು ನೆಡಬಹುದಿತ್ತು ಎಂದು ರಾಜಕೀಯ ವಿಶ್ಲೇಷಕ ಕೆ. ನಾಗೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.