ನಕ್ಸಲರ ಗಡುವು ಅಂತ್ಯ; ತುಟಿ ಬಿಚ್ಚುತ್ತಿಲ್ಲ ಕೇಂದ್ರ, ಬಿಹಾರ
ಪಾಟ್ನಾ, ಗುರುವಾರ, 2 ಸೆಪ್ಟೆಂಬರ್ 2010( 13:11 IST )
ನಾಲ್ವರು ಬಿಹಾರ ಪೊಲೀಸರನ್ನು ಅಪಹರಿಸಿ ಒತ್ತೆಯಾಗಿಟ್ಟುಕೊಂಡಿರುವ ಕೆಂಪು ಉಗ್ರರು, ತಮ್ಮ ಪಾಳಯದ ಎಂಟು ಮಂದಿಯನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ತುಟಿ ಬಿಚ್ಚುತ್ತಿಲ್ಲ.
ಎಂಟು ಮಂದಿ ನಕ್ಸಲರನ್ನು ಬಿಡುಗಡೆ ಮಾಡದೇ ಇದ್ದರೆ ತಮ್ಮ ವಶದಲ್ಲಿರುವ ಪೊಲೀಸರನ್ನು ಹತ್ಯೆ ಮಾಡುವುದಾಗಿ ಮಾವೋವಾದಿಗಳು ಬೆದರಿಕೆ ಹಾಕಿದ್ದಾರೆ. ಅದಕ್ಕಾಗಿ ನೀಡಿದ್ದ ಎರಡೆರಡು ಗಡುವುಗಳೂ ಮುಕ್ತಾಯಗೊಂಡಿವೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ಮೊದಲ ಗಡುವು ನೀಡಲಾಗಿತ್ತು. ಎರಡನೇ ಗಡುವು ಇಂದು (ಗುರುವಾರ) ಬೆಳಿಗ್ಗೆ 10 ಗಂಟೆಯದ್ದು.
ಬಿಹಾರ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಯಾವುದೇ ಪ್ರತಿಕ್ರಿಯೆಗೆ ಮುಂದಾಗದೇ ಇರುವ ಹಿನ್ನೆಲೆಯಲ್ಲಿ ನಕ್ಸಲರು ತಮ್ಮ ಅಂತಿಮ ಗಡುವನ್ನು ಇಂದು ಅಪರಾಹ್ನ ಮೂರು ಗಂಟೆಗೆ ವಿಸ್ತರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ ಬಿಹಾರ ಪೊಲೀಸ್ ಮಹಾ ನಿರ್ದೇಶಕರು ಇದನ್ನು ಖಚಿತಪಡಿಸಲು ನಿರಾಕರಿಸಿದ್ದಾರೆ.
ಎಂಟು ಮಂದಿ ನಕ್ಸಲರನ್ನು ಬಿಡುಗಡೆ ಮಾಡುವ ಗಡುವನ್ನು ವಿಸ್ತರಿಸಲಾಗಿದೆ ಎಂದು ಸ್ಥಳೀಯ ಪತ್ರಕರ್ತನಿಗೆ ಮಾವೋವಾದಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಏಳು ಮಂದಿಯನ್ನು ಕೊಂದು ಅಪಹರಿಸಿದ್ದರು... ಬಿಹಾರದ ಲಖಿಸರಾಯ್ ಜಿಲ್ಲೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಒಮ್ಮಿಂದೊಮ್ಮೆಲೇ ಪೊಲೀಸರ ಮೇಲೆ ದಾಳಿ ನಡೆಸಿದ್ದ ಮಾವೋವಾದಿಗಳು, ಸ್ಥಳದಲ್ಲೇ ಏಳು ಪೊಲೀಸರನ್ನು ಕೊಂದು ಹಾಕಿದ್ದರು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದರು.
ಈ ಹೊತ್ತಿನಲ್ಲಿ ಮೊಹಮ್ಮದ್ ಎಹ್ಸಾನ್, ರೂಪೇಶ್ ಕುಮಾರ್ ಸಿನ್ಹಾ, ಅಭಯ್ ಪ್ರಸಾದ್ ಯಾದವ್ ಮತ್ತು ಲೂಕಸ್ ತೇಟೆ ಎಂಬ ಪೊಲೀಸ್ ಸಿಬ್ಬಂದಿಗಳನ್ನು ನಕ್ಸಲರು ಅಪಹರಿಸಿದ್ದರು.
ಪೊಲೀಸರನ್ನು ಜೀವಂತವಾಗಿ ಬಿಡುಗಡೆ ಮಾಡಬೇಕಾದರೆ ಜಯ್ ಪಾಸ್ವಾನ್ ಮತ್ತು ತಂತಿ ಸೇರಿದಂತೆ ಜಾರ್ಖಂಡ್ ಮತ್ತು ಬಿಹಾರಗಳಿಗೆ ಸೇರಿದ ಎಂಟು ಮಂದಿ ನಕ್ಸಲ್ ನಾಯಕರನ್ನು ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಪೊಲೀಸರನ್ನು ಕೊಂದು ಹಾಕುತ್ತೇವೆ ಎಂದು ಕೆಂಪು ಉಗ್ರರು ಬೆದರಿಕೆ ಹಾಕುತ್ತಿದ್ದಾರೆ.
ಕೇಂದ್ರಕ್ಕೆ ಅಗ್ನಿಪರೀಕ್ಷೆ... ಈ ಹಿಂದೆ ಕಂದಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ನೂರಾರು ಪ್ರಯಾಣಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಈಗಲೂ ರಾಜಕೀಯ ಮಾಡುತ್ತಾ ಬರುತ್ತಿರುವ ಕಾಂಗ್ರೆಸ್ ಇದೀಗ ತೀವ್ರ ಮುಜುಗರ ಅನುಭವಿಸುತ್ತಿದೆ.
ಬಿಹಾರದಲ್ಲಿ ಅಧಿಕಾರದಲ್ಲಿರುವುದು ಜೆಡಿಯು-ಬಿಜೆಪಿ ಮೈತ್ರಿ ಸರಕಾರ. ಇನ್ನಿತರ ಎಲ್ಲಾ ವಿಚಾರಗಳಲ್ಲೂ ರಾಜ್ಯಗಳಲ್ಲಿ ಮೂಗು ತೂರಿಸುವ ಕೇಂದ್ರ ಸರಕಾರವು ಅಪಹರಣ ಪ್ರಹಸನದ ಕುರಿತು ತುಟಿ ಬಿಚ್ಚುತ್ತಿಲ್ಲ. ತಪ್ಪಿಯೂ ತಾವು ಅಪಹೃತರ ಕುಟುಂಬಗಳ ಕೂಗನ್ನು ಆಲಿಸುತ್ತಿದ್ದೇವೆ ಎಂಬ ಮಾತು ಕೂಡ ಹೊರ ಹಾಕುತ್ತಿಲ್ಲ.
1999ರ ಡಿಸೆಂಬರ್ 24ರಂದು ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ 192 ಮಂದಿಯನ್ನು ತಾಲಿಬಾನ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನದಿಂದ ರಕ್ಷಿಸುವ ನಿಟ್ಟಿನಲ್ಲಿ ಮೂವರು ಇಸ್ಲಾಮಿಕ್ ಭಯೋತ್ಪಾದಕರನ್ನು ಬಿಜೆಪಿ ಸರಕಾರವು ಬಿಡುಗಡೆ ಮಾಡಿತ್ತು.
ಸಂಬಂಧಿಗಳ ಕೂಗು ಕೇಳಿ.... ನನ್ನ ಗಂಡನನ್ನು ದಯವಿಟ್ಟು ಬಿಡುಗಡೆ ಮಾಡಿ ಎಂದು ಮಾವೋವಾದಿಗಳಿಗೆ ನಾನು ಮನವಿ ಮಾಡುತ್ತಿದ್ದೇನೆ. ಹಾಗೊಂದು ವೇಳೆ ಸಾಧ್ಯವಿಲ್ಲ ಎನ್ನುವುದಾದರೆ ನಮ್ಮ ಮನೆಯ ಎಲ್ಲರನ್ನೂ ಕೊಂದು ಬಿಡಿ. ನಾನಂತೂ ವಿಷ ತಿಂದು ಸಾಯಲು ಸಿದ್ಧಳಿದ್ದೇನೆ. ದಯವಿಟ್ಟು ನನ್ನನ್ನೂ ಕರೆದುಕೊಂಡು ಹೋಗಿ -- ಹೀಗೆಂದು ಗೋಳು ಹೊಯ್ದುಕೊಳ್ಳುತ್ತಿರುವುದು ಅಭಯ್ ಯಾದವ್ ಪತ್ನಿ ರಜನಿ ದೇವಿ.
ರೂಪೇಶ್ ಕುಮಾರ್ ತಾಯಿ ಮಂಜು ಸಿನ್ಹಾ ಮಾವೋವಾದಿಗಳನ್ನು ಬಿಡುಗಡೆ ಮಾಡುವಂತೆ ಸರಕಾರಗಳನ್ನು ಒತ್ತಾಯಿಸಿದ್ದು, ಧರಣಿ ಆರಂಭಿಸಿದ್ದಾರೆ.
ದಯವಿಟ್ಟು ಅವರ ಬೇಡಿಕೆಯನ್ನು ಈಡೇರಿಸಿ, ನಮ್ಮ ಪುತ್ರನನ್ನು ನನಗೆ ಜೀವಂತವಾಗಿ ಮರಳಿಸಿ ಎಂದು ಆಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಾಗಲೀ, ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರಾಗಲೀ ನಕ್ಸಲರ ಜತೆ ಸಂಧಾನ ನಡೆಸುವ ಬದಲು ಕಾರ್ಯಾಚರಣೆ ನಡೆಸುವುದಕ್ಕೆ ಒಲವು ತೋರಿಸಿದ್ದಾರೆ.