ಜಿಹಾದಿ ಭಯೋತ್ಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಕೇಸರಿ ಭಯೋತ್ಪಾದನೆ ಎಂಬ ಆರೋಪವನ್ನು ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಗೃಹಸಚಿವ ಪಿ. ಚಿದಂಬರಂ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಹಿಂದೂಗಳ ಭಾವನೆಗಳಿಗೆ ಅಪಮಾನ ಎಸಗಿರುವ ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಹಾಗೆ ಕ್ಷಮೆ ಯಾಚಿಸದೇ ಇದ್ದಲ್ಲಿ ಅವರನ್ನು ಸಂಪುಟದಿಂದ ಪ್ರಧಾನಿ ಕೈ ಬಿಡಬೇಕು ಎಂದರು.
ಅತ್ತ ಭೋಪಾಲ್‌ನಲ್ಲಿ ಆರೆಸ್ಸೆಸ್ ಹಿರಿಯ ನಾಯಕ ರಾಮ್ ಮಾಧವ್ ಕೂಡ ಚಿದಂಬರಂ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಪ್ರಕಾರ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಎನ್ನುವುದು ದೇಶದಲ್ಲಿಲ್ಲ. ಆದರೆ ಕೇಸರಿ ಭಯೋತ್ಪಾದನೆಯೆಂಬ ಪಿಶಾಚಿಯನ್ನು ಸೃಷ್ಟಿಸುವ ಯತ್ನಗಳು ಹಲವು ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಕೇವಲ ಮೂರು-ನಾಲ್ಕು ಘಟನೆಗಳಿಂದ ಇಂತಹ ಉಲ್ಲೇಖಗಳನ್ನು ಮಾಡಲಾಗದು ಎಂದು 'ಭಯೋತ್ಪಾನೆ ಮತ್ತು ಮಾಧ್ಯಮಗಳ ರಾಜಕೀಯ' ಎಂಬ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಜಿಹಾದಿ ಭಯೋತ್ಪಾದನೆಯ ಕಡೆಗಿನ ಗಮನವನ್ನು ವಿಕೇಂದ್ರೀಕರಿಸುವ ಯತ್ನವಾಗಿ ಕೇಸರಿ ಭಯೋತ್ಪಾದನೆ ಎಂಬ ವ್ಯಾಖ್ಯಾನವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಮಾಧವ್, ಇದರ ಹಿಂದೆ ಸ್ಥಾಪಿತ ರಾಜಕೀಯ ಹಿತಾಸಕ್ತಿಗಳು ಅಡಗಿವೆ; ಅದೇ ಕಾರಣದಿಂದ ಜಿಹಾದಿ ಭಯೋತ್ಪಾದನೆ ಕುರಿತು ಸರಕಾರದಲ್ಲಿ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ ಎಂದರು.
ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಹೇಳಲಾಗುತ್ತಿರುವ ಪ್ರಸಕ್ತ ನಡೆಯುತ್ತಿರುವ ಮೂರರಿಂದ ನಾಲ್ಕು ಬಾಂಬ್ ಸ್ಫೋಟ ಪ್ರಕರಣಗಳ ವಿಚಾರಣೆಯ ಕುರಿತು ಪ್ರಸ್ತಾಪಿಸುತ್ತಾ ಅವರು, ಇದರ ಹಿಂದಿನ ನೈಜ ರೂವಾರಿಗಳು ಯಾರೆಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಯಾವುದೇ ರೀತಿಯ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆಗಳಿಲ್ಲ. ಆದರೆ ಭಯೋತ್ಪಾದನೆಗೆ ಬಣ್ಣವೇ ಇಲ್ಲ ಎಂದು ಹೇಳಲಾಗದು. ಯಾಕೆಂದರೆ ಅದು ಧಾರ್ಮಿಕ ಸಿದ್ಧಾಂತಗಳನ್ನು ಹೊಂದಿರುತ್ತದೆ ಎಂದು ಯಾವುದೇ ಸಂಘಟನೆಗಳನ್ನು ಉಲ್ಲೇಖಿಸದೆ ತಿಳಿಸಿದರು.