ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಮ್ಮುವಿನಲ್ಲಿ ಚೀನಾ ಸೇನೆ; ಭಾರತದಿಂದ ತೀವ್ರ ಕಳವಳ (PLA | India | China | Pak-occupied Kashmir)
Bookmark and Share Feedback Print
 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ತನ್ನ ಸೇನಾಪಡೆಯನ್ನು ನಿಯೋಜಿಸಿರುವುದು ಮತ್ತು ಪ್ರಾಂತ್ಯದಲ್ಲಿ ಅದರ ಚಟುವಟಿಕೆಗಳ ಕುರಿತು ಭಾರತವು ತನ್ನ ಕಳವಳವನ್ನು ಶುಕ್ರವಾರ ರವಾನಿಸಿದೆ.

ಪಾಕಿಸ್ತಾನದ ವಶದಲ್ಲಿರುವ ಜಮ್ಮು-ಕಾಶ್ಮೀರದ ಗಿಲ್ಗಿಟ್-ಬಾಲ್ತಿಸ್ತಾನ್ ಪ್ರದೇಶದಲ್ಲಿ ಚೀನಾವು ಜನ ವಿಮೋಚನಾ ಸೇನೆಯ (ಪೀಪಲ್ಸ್ ಲಿಬರೇಶನ್ ಆರ್ಮಿ) 11,000 ಯೋಧರನ್ನು ನಿಯೋಜನೆಗೊಳಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯಿಸಿದೆ.

ಚೀನಾ ಸೇನೆಯು ಜಮಾವಣೆಗೊಂಡಿರುವುದು ಮತ್ತು ಅದರ ಚಲನವಲನಗಳ ಕುರಿತು ಭಾರತವು ತನ್ನ ಚೀನಾದ ರಾಯಭಾರಿ ಎಸ್. ಜೈಶಂಕರ್ ಅವರ ಮೂಲಕ ಕಳವಳವನ್ನು ವ್ಯಕ್ತಪಡಿಸಿದೆ.

ಶುಕ್ರವಾರ ಚೀನಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಜಾಂಗ್ ಜಿಜುನ್ ಅವರ ಜತೆ ಮಾತುಕತೆ ನಡೆಸಿದ ಜೈಶಂಕರ್ ಭಾರತದ ಕಳವಳವನ್ನು ಮನಮುಟ್ಟುವಂತೆ ರವಾನಿಸಿದ್ದಾರೆ ಎಂದು ಬೀಜಿಂಗ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಗಿಲ್ಗಿಟ್ ಪ್ರಾಂತ್ಯದಲ್ಲಿ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿ ಜಮಾವಣೆಗೊಂಡಿದೆ ಎಂಬ ವರದಿಗಳನ್ನು ಗುರುವಾರ ಚೀನಾ ತಳ್ಳಿ ಹಾಕಿರುವ ಹೊರತಾಗಿಯೂ ಜೈಶಂಕರ್ ಈ ವಿಚಾರವನ್ನು ಬೀಜಿಂಗ್ ಸಚಿವರ ಗಮನಕ್ಕೆ ತಂದಿದ್ದಾರೆ.

ಚೀನಾ ಕುರಿತು ಬೆಳವಣಿಗೆಗಳ ಕುರಿತು ಕರೆಯಲಾಗಿದ್ದ ಭದ್ರತೆಯ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಜೈಶಂಕರ್ ಗುರುವಾರವಷ್ಟೇ ಬೀಜಿಂಗ್‌ಗೆ ಮರಳಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಹಿಸಿಕೊಂಡಿದ್ದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೇನೆಯ ಪ್ರಭಾವ ಹೆಚ್ಚುತ್ತಿದೆ, ತನ್ನ ಪಿಎಲ್ಎ ಪಡೆಗಳನ್ನು ಅಲ್ಲಿ ಜಮಾವಣೆಗೊಳಿಸುತ್ತಿದೆ ಎಂದು ಅಮೆರಿಕಾದ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದ ನಂತರ ಭಾರತವು ಸ್ವತಂತ್ರವಾಗಿ ಪರಿಸ್ಥಿತಿಯನ್ನು ಕೂಲಂಕಷವಾಗಿ ಗಮನಿಸುವ ನಿರ್ಧಾರಕ್ಕೆ ಬಂದಿತ್ತು. ಅಲ್ಲದೆ ವರದಿ ನಿಜವೇ ಆಗಿದ್ದಲ್ಲಿ ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿತ್ತು.

ವರದಿಗಳು ನಿಜವೇ ಆಗಿದ್ದಲ್ಲಿ ಇದೊಂದು ಗಂಭೀರವಾದ ವಿಚಾರ. ಹಾಗಿದ್ದಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಸುರಕ್ಷತೆ ಕುರಿತು ಅಗತ್ಯವಿರುವ ಎಲ್ಲಾ ಸೂಕ್ತ ಕ್ರಮಗಳನ್ನೂ ನಾವು ತೆಗೆದುಕೊಳ್ಳಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ