ಸತತ ನಾಲ್ಕನೇ ಬಾರಿ ಸೋನಿಯಾ ಗಾಂಧಿಯವರು ಅಧ್ಯಕ್ಷೆಯಾಗುತ್ತಿರುವುದನ್ನು ಟೀಕಿಸಿದ್ದ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅವರು 40 ಬಾರಿಯಾದರೂ ಪಕ್ಷದ ಅಧಿನಾಯಕಿಯಾಗಿ ಮುಂದುವರಿಯಬಹುದು ಎಂದು ಹೇಳಿದೆ.
ಸೋನಿಯಾ ಮರು ಆಯ್ಕೆ ಕುರಿತಂತೆ ಬಿಜೆಪಿ ನೀಡಿರುವ ಸಲಹೆಗಳನ್ನು ತಿರಸ್ಕರಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ, ನಾವು ಮತ್ತೊಂದು ಪಕ್ಷದ ಸಂವಿಧಾನದ ಕುರಿತು ಚರ್ಚೆ ನಡೆಸಲು ಹೋಗುವುದಿಲ್ಲ; ಪಕ್ಷ ಬಯಸಿದಲ್ಲಿ ಅವರು ನಾಲ್ಕು ಬಾರಿಯೇ ಯಾಕೆ, 40 ಬಾರಿಯಾದರೂ ಅಧ್ಯಕ್ಷೆಯಾಗುತ್ತಾರೆ ಎಂದರು.
ಪ್ರಮುಖ ಪ್ರತಿಪಕ್ಷಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾ ಗತಕಾಲವನ್ನೂ ದ್ವಿವೇದಿ ನೆನಪಿಸಿದ್ದಾರೆ.
ನಿರಂತರ 17 ವರ್ಷಗಳಷ್ಟು ಸುದೀರ್ಘಾವಧಿಗೆ ಜವಾಹರಲಾಲ್ ನೆಹರೂ ಪ್ರಧಾನ ಮಂತ್ರಿಯಾಗಿದ್ದಾಗ ನಾವು ಪ್ರಜಾಪ್ರಭುತ್ವವನ್ನು ಕಂಡಿದ್ದೇವೆ. ಇದೇ ರೀತಿ ಇಂದಿರಾ ಗಾಂಧಿಯವರ ಕಾಲದಲ್ಲಿ ಕೂಡ. ಇತರರಿಗೆ ಈ ಕುರಿತು ಮಾತನಾಡುವ ನೈತಿಕತೆಯೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ಪಕ್ಷದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂಬ ಕೇಸರಿ ಪಕ್ಷದ ಆರೋಪಕ್ಕೂ ಅವರು ಕಿಡಿ ಕಾರಿದ್ದಾರೆ. 'ಕಾಂಗ್ರೆಸ್ ಒಂದು ಪ್ರಜಾಪ್ರಭುತ್ವವನ್ನು ಹೊಂದಿರುವ ಪಕ್ಷ. ಇಲ್ಲಿ ಎಲ್ಲವೂ ಚರ್ಚೆ ನಡೆದ ನಂತರವೇ ಅಂತಿಮ ತೀರ್ಮಾನ ಹೊರಗೆ ಬೀಳುತ್ತದೆ. ಇಂತಹ ಪರಿಸ್ಥಿತಿಯನ್ನು ಇತರ ಪಕ್ಷಗಳಲ್ಲಿ ಕಾಣುವುದು ಸಾಧ್ಯವಿಲ್ಲ' ಎಂದರು.
ಕಾಂಗ್ರೆಸ್ ತನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಸುವ ಸಂದರ್ಭದಲ್ಲಿ ತನ್ನ ಸಂವಿಧಾನವನ್ನು ಮರೆತು ಬಿಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ, ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಅಧ್ಯಕ್ಷನೋರ್ವ ಎರಡು ಬಾರಿಗಿಂತ ಹೆಚ್ಚು ಸಲ ಮುಂದುವರಿಯಲು ಅವಕಾಶವಿಲ್ಲ. ಆದರೆ ಇದು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅನ್ವಯವಾಗುವುದಿಲ್ಲ ಎಂದು ಫೆರ್ನಾಂಡಿಸ್ ತಿಳಿಸಿದ್ದಾರೆ.
ಸೋನಿಯಾ ಅವರು ಸತತ ನಾಲ್ಕನೇ ಬಾರಿ ಆಯ್ಕೆಯಾಗಬೇಕೆಂಬುದು ಪಕ್ಷ ಮತ್ತು ಅದರ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.