ಯಾವುದೇ ಕಾರಣವಿಲ್ಲದೆ ಹೋದಲ್ಲೆಲ್ಲ ಹುಳುಗಳನ್ನು ತರಿದಂತೆ ಮಾನವ ಜೀವಿಗಳನ್ನು ಕೊಂದು ಹಾಕುತ್ತಿದ್ದ ಕರ್ನಾಟಕ ಮೂಲದ ಸೈಕೋಪಾತ್ ಸರಣಿ ಹಂತಕನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
55ರ ಹರೆಯ ರಾಮಚಂದ್ರ ರಾಥೋಡ್ ಎಂಬಾತನೇ ಆರೋಪಿ. ಗುಲ್ಬರ್ಗಾದವನಾಗಿರುವ ಈತನನ್ನು ಮೊಬೈಲ್ ಫೋನ್ ಮೂಲಕ ಸಿಕ್ಕ ಸುಳಿವಿನಿಂದ ಹೈದರಾಬಾದ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತ 16ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.
ಹಣದಾಸೆ ಅಥವಾ ದ್ವೇಷ -- ಇಂತಹ ಯಾವುದೇ ಕಾರಣಗಳಿಲ್ಲದೆ ಹೊಂಚು ಹಾಕಿ ಕೊಲ್ಲುವ ಅಭ್ಯಾಸವನ್ನು ರೂಢಿಸಿಕೊಂಡಿದ್ದ ರಾಮಚಂದ್ರ ಇತ್ತೀಚೆಗಷ್ಟೇ ಹೈದರಾಬಾದ್ ಹೊರವಲಯದ ಕೈರತಾಬಾದ್ ಎಂಬಲ್ಲಿನ ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಶೋಕ್ ಕುಮಾರ್ ಝಾ (45) ಅವರನ್ನು ಹತ್ಯೆ ಮಾಡಿದ್ದ.
ನಂತರ ಸೆಕ್ಯುರಿಟಿಯಲ್ಲಿದ್ದ ಮೊಬೈಲ್ ಫೋನನ್ನು ಕೊಂಡು ಹೋಗಿ ಬಳಸುತ್ತಿದ್ದ. ಇದೇ ಆಧಾರದಲ್ಲಿ ಪೊಲೀಸರು ಸರಣಿ ಕೊಲೆಗಳ ರಹಸ್ಯವನ್ನು ಗುಲ್ಬರ್ಗಾದಲ್ಲಿ ಬೇಧಿಸಿದ್ದಾರೆ.
ಪೊಲೀಸರ ಪ್ರಕಾರ ರಾಮಚಂದ್ರನ ಹತ್ಯಾ ಸರಣಿ ಆರಂಭವಾದದ್ದು ನಲ್ಲಕುಂಟಾದಲ್ಲಿ. ಇಲ್ಲಿ ಜುಲೈ ಮೂರು ಮತ್ತು ಆಗಸ್ಟ್ 25ರಂದು ಡಬ್ಬಲ್ ಮರ್ಡರ್ ಮಾಡಿದ್ದ.
ತಲೆ ಒಡೆಯುತ್ತಿದ್ದ... ಈತನಿಂದ ಕೊಲೆಗೀಡಾದ ಬಹುತೇಕ ಮಂದಿಯ ಮುಖ ಗುರುತೇ ಸಿಗದಂತೆ ಜಜ್ಜಿ ಹೋಗಿವೆ. ಕೊಲೆ ಮಾಡಲು ರಾಮಚಂದ್ರ ಬಳಸುತ್ತಿದ್ದುದು ಒಂದೋ ಕಬ್ಬಿಣದ ರಾಡು ಅಥವಾ ಚಪ್ಪಡಿ ಕಲ್ಲು. ಇವೆರಡರಿಂದ ನೇರವಾಗಿ ತಲೆಗೆ ದಾಳಿ ಮಾಡಿ ಕೊಂದು ಹಾಕುತ್ತಿದ್ದ.
ತನ್ನ ಕೆಲಸ ಮುಗಿದ ನಂತರ ಕೊಲೆಯಾದ ವ್ಯಕ್ತಿಯಲ್ಲಿ ಏನಾದರೂ ಅಮೂಲ್ಯ ವಸ್ತುಗಳಿದ್ದರೆ ಅದನ್ನು ಕಸಿದುಕೊಳ್ಳುತ್ತಿದ್ದ. ಆದರೆ ಉದ್ದೇಶ ದರೋಡೆ ಅಥವಾ ಕಳ್ಳತನವಲ್ಲ. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಕಾರಣ ಆತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಎ.ಕೆ. ಖಾನ್ ತಿಳಿಸಿದ್ದಾರೆ.
ನಾರಾಯಣಗೂಡಾದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ 28ರ ಹರೆಯದ ಎಲ್. ತರುಣ್, ಬರ್ಕಾತ್ಪುರದ ಅಪಾರ್ಟ್‌ಮೆಂಟ್‌ನಲ್ಲಿನ ವಾಚ್‌ಮನ್ ಪುತ್ರ 19ರ ಹರೆಯ ಬಿ. ನರೇಶ್, ನಾರಾಯಣಗೂಡಾದ ಆಸ್ಪತ್ರೆಯೊಂದರ ವಾಚ್‌ಮನ್ 60ರ ಹರೆಯದ ಕೆ. ಕೃಷ್ಣ ಯಾದವ್, ನಲ್ಲಕುಂಟಾದಲ್ಲಿನ ವಾಚ್‌ಮನ್ ಜೋಡಿ ಜಿ. ಗೋಪಾಲ್ ಮತ್ತು ಆಂಜನೇಯ ಮಾಂಗ ಎಂಬವರನ್ನು ತಾನು ಕೊಂದಿರುವುದಾಗಿ ರಾಮಚಂದ್ರ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಗುಲ್ಬರ್ಗಾದಲ್ಲೂ ಆರು ಕೊಲೆ ಮಾಡಿದ್ದ... ತಾವು ಬಂಧಿಸಿರುವ ಆರೋಪಿ ರಾಮಚಂದ್ರ ಗುಲ್ಬರ್ಗಾದಲ್ಲೂ ಕನಿಷ್ಠ ಆರು ಕೊಲೆಗಳನ್ನು ಮಾಡಿದ್ದಾನೆ ಎಂದು ಹೈದರಾಬಾದ್ ಪೊಲೀಸರು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ವತಃ ಸಂಬಂಧಿಕರಿಗೇ ಬೇಡವಾಗಿದ್ದ ಗುಲ್ಬರ್ಗಾದ ಹನುಮಾನ್ ತಾಂಡಾ ನಿವಾಸಿಯಾಗಿರುವ ರಾಮಚಂದ್ರ 11ರ ಹರೆಯದಲ್ಲೇ ಮದ್ಯ ಸೇವಿಸುತ್ತಾ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವು ಬಾರಿ ಜೈಲು ಸೇರಿದ್ದ.
ದರೋಡೆ ಪ್ರಕರಣವೊಂದರಲ್ಲಿ ಗುಲ್ಬರ್ಗಾ ಪೊಲೀಸರಿಂದ ಬಂಧನಕ್ಕೊಳಗಾಗಿ, 16 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿರುವುದನ್ನು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.
ಅದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ಹೈದರಾಬಾದ್‌ನಲ್ಲಿ ಸರಣಿ ಹತ್ಯೆ ನಡೆಸಿದಂತೆ ಗುಲ್ಬರ್ಗಾದಲ್ಲೂ ನಡೆಸಿದ್ದೇನೆ ಎಂದು ಹೇಳಿರುವುದು. ಕನಿಷ್ಠ ಆರು ಮಂದಿಯನ್ನು ತಾನು ಕರ್ನಾಟಕದಲ್ಲಿ ಕೊಂದಿರುವುದಾಗಿ ಹೇಳಿದ್ದಾನೆ.
ಈ ಸಂಬಂಧ ವಿಚಾರಣೆ ನಡೆಸುವಂತೆ ಗುಲ್ಬರ್ಗಾ ಪೊಲೀಸರಿಗೆ ಹೈದರಾಬಾದ್ ಪೊಲೀಸರು ಆಹ್ವಾನ ನೀಡಿದ್ದಾರೆ.