ಜನ್ಮಾಷ್ಟಮಿ ಸಂದರ್ಭದಲ್ಲಿ ಕೃಷ್ಣ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಲ್ಲುವುದು ಮಾಮೂಲಿ. ಆದರೆ ಇಲ್ಲೊಂದು ವಿಭಿನ್ನವಾದ ಸಂಪ್ರದಾಯವೊಂದು ನಡೆಯುತ್ತಾ ಬಂದಿದೆ. ಅದಕ್ಕೆ ಜಾತ್ಯತೀತ ಲೇಪನವೂ ಇದೆ. ಅದೇ ಮಸೀದಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ.
ಇಂತಹ ಕೋಮು ಸೌಹಾರ್ದತೆಯನ್ನು ಮೆರೆಸುವ ಮಸೀದಿ ಇರುವುದು ರಾಜಸ್ತಾನದ ಶೇಖಾವತಿ ಪ್ರಾಂತ್ಯದಲ್ಲಿ. ಇಲ್ಲಿ ಹಿಂದೂ - ಮುಸ್ಲಿಮರು ಭೇದ-ಭಾವವಿಲ್ಲದೆ ಮಸೀದಿಗೆ ಬಂದು ಕೃಷ್ಣನನ್ನು ಆರಾಧಿಸಿ, ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ.
PR
ಜುಂಜುನು ಜಿಲ್ಲಾ ಕೇಂದ್ರದಿಂದ 40 ಕಿಲೋ ಮೀಟರ್ ದೂರದಲ್ಲಿರುವ ನರಾದ್ ಗ್ರಾಮದಲ್ಲಿನ ಶಕಾರ್ ಪೀರ್ ಬಾಬಾರವರ ಮಸೀದಿ ಎಂದೇ ಹೆಸರು ಪಡೆದಿರುವ 'ನರಾದ್ ಪೀರ್ ಬಾಬಾ ಕೀ ದರ್ಗಾ'ದಲ್ಲಿ ಎಂದಿನಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ ನಡೆದಿದೆ.
ಜನ್ಮಾಷ್ಟಮಿಯಂದು ಹಿಂದೂ-ಮುಸ್ಲಿಮರು ಬಾಬಾರವರ ಆಶೀರ್ವಾದ ಪಡೆಯಲು, ಪುರಾತನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಲುಗಟ್ಟಿ ನಿಲ್ಲುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಧರ್ಮಭೇದವಿಲ್ಲದ ಕಾರ್ಯಕ್ರಮಕ್ಕೆ ಹರ್ಯಾಣ, ಗುಜರಾತ್, ಪಂಜಾಬ್, ದೆಹಲಿ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಭಕ್ತರು ಬರುತ್ತಾರೆ.
ಶ್ರೀಕೃಷ್ಣ ಜನ್ಮಾಷ್ಠಮಿಯಂದು ಈ ರೀತಿ ಹಿಂದೂ - ಮುಸ್ಲಿಮರು ಜತೆ ಸೇರುವ ಸಂಪ್ರದಾಯ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಈ ಸಂದರ್ಭದಲ್ಲಿ ಮಸೀದಿಯನ್ನು ಸುಣ್ಣ-ಬಣ್ಣಗಳಿಂದ ಸಿಂಗರಿಸಲಾಗುತ್ತಾ ಬರಲಾಗಿದೆ.
ಅಜ್ಮೀರ್ ಖ್ವಾಜಾ ಮೊಯಿನುದ್ದೀನ್ ಕಿಸ್ತಿ ಮಸೀದಿಗಿಂತಲೂ ಪುರಾತನವಾದ ಈ ದರ್ಗಾದ ಗುಮ್ಮಟವನ್ನು ಕಲ್ಲು ಬಳಸದೆ, ಮಣ್ಣಿನಿಂದಲೇ ಕಟ್ಟಿರುವುದು ವಿಶೇಷ. ಸ್ಥಳೀಯರ ಪ್ರಕಾರ ಇಲ್ಲಿನ ಭಕ್ತರಿಗೆ ಸಕ್ಕರೆಯ ಮೂಲಕ ಹರಸುತ್ತಿದ್ದ ಕಾರಣ ಬಾಬಾ ಅವರಿಗೆ ಶಕರ್‌ಬಾರ್ ಪೀರ್ ಎಂಬ ಹೆಸರು ಬಂದಿದೆ.
ಇಂತಹ ಮಸೀದಿಗೆ ಬರುವ ಮುಸ್ಲಿಮರು ಬಾಬಾ ಅವರ ಸಮಾಧಿಗೆ ಚಾದರ ಹೊದಿಸುವ ಮೂಲಕ ತಮ್ಮ ಪ್ರಾರ್ಥನೆ ಸಲ್ಲಿಸಿದರೆ, ಹಿಂದೂಗಳು ಕೇಶಮುಂಡನ ಅಥವಾ ಇನ್ನಿತರ ಧಾರ್ಮಿಕ ಕರ್ಮಗಳನ್ನು ನೆರವೇರಿಸುತ್ತಾರೆ.
ಮಾನಸಿಕ ಖಾಯಿಲೆ ಹೊಂದಿರುವವರು ಇಲ್ಲಿನ ಬಾಬಾರವರ ಹಾರೈಕೆಯಿಂದ ಪವಾಡ ಸದೃಶರಾಗಿ ಸಾಮಾನ್ಯರಂತೆ ಬದಲಾಗುತ್ತಾರಂತೆ. ಇನ್ನಿತರ ಹಲವು ರೋಗಗಳಿಗೂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಪರಿಹಾರ ದೊರಕುತ್ತದೆ ಎಂದು ಭಕ್ತರು ನಂಬುತ್ತಾರೆ.
ಇಂತಹ ಅಪರೂಪದ ಕೋಮು ಸೌಹಾರ್ದತೆಯನ್ನು ಹೊಂದಿರುವ ಪುರಾತನ ಮಸೀದಿಯಲ್ಲಿ ಕಾಣುವ ಅಪವಾದವೆಂದರೆ ಮಹಿಳೆಯರಿಗೆ ಪ್ರವೇಶವಿಲ್ಲದಿರುವುದು.