ದಾಖಲೆಯ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ನಂತರ ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಮತ್ತೆ ಕೆದಕಿರುವ ಶಿವಸೇನೆ, 'ಗಾಂಧಿ' ಕುಟುಂಬಕ್ಕೆ ಸವಾಲೊಡ್ಡುವ ಗಂಡಸರೇ ಪಕ್ಷದಲ್ಲಿಲ್ಲವೇ ಎಂದು ಪ್ರಶ್ನಿಸಿದೆ.
ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಿರುವ ಸಂಪಾದಕೀಯದಲ್ಲಿ ಬಾಳಾ ಠಾಕ್ರೆಯವರು ಸೋನಿಯಾ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ.
ಒಂದು ಕಾಲದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿದ್ದ ಏಕೈಕ ಗಂಡಸು ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಎಂದು ಹೇಳಲಾಗುತ್ತಿತ್ತು. ಈಗ ಸೋನಿಯಾ ಗಾಂಧಿ ಯುಗದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬನೇ ಒಬ್ಬ ಗಂಡಸು ಇಲ್ಲವೇ ಎಂದು ಪ್ರಶ್ನಿಸುವ ಕಾಲ ಬಂದಿದೆ. ಹಾಗೊಂದು ವೇಳೆ ಇದ್ದಿದ್ದರೆ ಪಕ್ಷದ ಪ್ರತಿಷ್ಠೆಯನ್ನು ವಿದೇಶಿ ಮಹಿಳೆಯೊಬ್ಬರಿಗೆ ಇಷ್ಟೊಂದು ವಿನೀತವಾಗಿ ಒಪ್ಪಿಸುತ್ತಿರಲಿಲ್ಲ ಎಂದು ಸಂಪಾದಕೀಯದಲ್ಲಿ ಬರೆದಿದ್ದಾರೆ.
ಅದೇ ಹೊತ್ತಿಗೆ ಕಾಂಗ್ರೆಸ್ ಸಂಸ್ಥಾಪಕ ಎ.ಒ. ಹ್ಯೂಮ್ ಓರ್ವ ವಿದೇಶಿಗ ಎಂಬುದನ್ನೂ ಸಾಮ್ನಾ ಬೆಟ್ಟು ಮಾಡಿ ತೋರಿಸಿದೆ. ಆದರೆ ಅವರು ತನ್ನ ವಿದೇಶಿ ಮೂಲದ ಕಾರಣದಿಂದ ಪಕ್ಷದ ಅಧ್ಯಕ್ಷರಾಗಿರಲಿಲ್ಲ. ಬದಲಿಗೆ ಭಾರತದ ನಾಯಕರಾದ ಸರೇಂದ್ರನಾಥ್ ಬ್ಯಾನರ್ಜಿ ಅಥವಾ ದಾದಾಬಾಯ್ ನರೋಜಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು ಎಂದು ಠಾಕ್ರೆ ವಿವರಣೆ ನೀಡಿದ್ದಾರೆ.
'1998ರಲ್ಲಿ ಶರದ್ ಪವಾರ್, ಮಖನ್ ಲಾಲ್ ಫತೇದಾರ್ ಮತ್ತು ಭಜನ್ ಲಾಲ್ ಮುಂತಾದ ನಾಯಕರು ಕಾಂಗ್ರೆಸ್ ಅಧ್ಯಕ್ಷ ಸೀತರಾಮ್ ಕೇಸರಿಯವರನ್ನು ಪದಚ್ಯುತಗೊಳಿಸಿ ರಾಜೀವ್ ಗಾಂಧಿಯವರ ವಿಧವೆ ಪತ್ನಿ ಸೋನಿಯಾರನ್ನು ಪಕ್ಷದ ಅಧ್ಯಕ್ಷೆಯನ್ನಾಗಿಸಿದರು. ಆಕೆಯ ತಲೆಯ ಮೇಲೆ ಬಂದೂಕನ್ನು ಇಡುವ ತಮ್ಮ ಇಚ್ಛೆಯನ್ನು ಈ ಮೂಲಕ ಅವರು ಪೂರೈಸಿಕೊಂಡಿದ್ದರು'
'ಆದರೆ ಈ ನಾಯಕರು ಸೋನಿಯಾ ಮೈನೋ ಗಾಂಧಿಯವರ ವಿದೇಶಿ ಮೂಲವನ್ನು ಪ್ರಶ್ನಿಸಲು ಮುಂದಾಗಿ ಬಲವಂತದಿಂತ ಪಕ್ಷವನ್ನು ತೊರೆಯಬೇಕಾಯಿತು. ನಂತರದ ದಿನಗಳಲ್ಲಿ ಇದೇ ಕಾರಣಕ್ಕೆ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಲಾಯಿತು'
'ಈಗ ಸೋನಿಯಾ ಗಾಂಧಿಯವರ ಪ್ರಮುಖ ಗಹನವಿರುವುದು ಪುತ್ರ ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನ ಮಂತ್ರಿಯನ್ನಾಗಿ ಮಾಡುವುದು. ದುರದೃಷ್ಟವೆಂದರೆ ಅವರಿಗೆ ಯಾರೊಬ್ಬರೂ ಸವಾಲು ಹಾಕುವವರು ಇಲ್ಲದೇ ಇರುವುದು'
'ಒಂದು ಕಾಲದಲ್ಲಿ ಮಹಾತ್ಮಾ ಗಾಂಧೀಜಿಯವರ ನಿರ್ಧಾರಗಳನ್ನು ಪ್ರಶ್ನಿಸುವ ಮತ್ತು ಸವಾಲು ಹಾಕುವ ಛಾತಿ ಹೊಂದಿದ್ದ ಪಕ್ಷವು ಇಂದು ನೂತನ ಬದಲಾವಣೆಯೊಂದಿಗೆ ಇಡೀ ಪಕ್ಷವು ಸೋನಿಯಾ ಗಾಂಧಿಯವರನ್ನು ಒಪ್ಪಿಕೊಂಡು, ಮಂಡಿಯೂರಿದೆ'
ಹೀಗೆ, ತನ್ನ ಸಂಪಾದಕೀಯದುದ್ದಕ್ಕೂ ಬಾಳಾ ಠಾಕ್ರೆಯವರು ಸೋನಿಯಾ ಗಾಂಧಿಯ ನಾಯಕತ್ವವನ್ನು ಪ್ರಶ್ನಿಸುತ್ತಾ, ಕಾಂಗ್ರೆಸ್ ಪಕ್ಷ ಎತ್ತ ಸಾಗುತ್ತಿದೆ ಎಂಬುದನ್ನು ಕಟುವಾಗಿ ವಿಶ್ಲೇಷಣೆ ನಡೆಸಿದ್ದಾರೆ.