ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ (India | BrahMos | cruise missile | Russia)
Bookmark and Share Feedback Print
 
290 ಕಿಲೋ ಮೀಟರ್ ವ್ಯಾಪ್ತಿ ಸಾಮರ್ಥ್ಯದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾನುವಾರ ಭಾರತವು ಯಶಸ್ವಿಯಾಗಿ ಪೂರೈಸಿದೆ.

ಭಯೋತ್ಪಾದಕರ ಅಡಗುದಾಣಗಳ ಮೇಲಿನ ದಾಳಿ ಸೇರಿದಂತೆ ಇತರೆಡೆಗೆ ಹಾನಿಯಾಗದಂತೆ ಗುರಿಯನ್ನು ನಿಖರವಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯನ್ನು ಒರಿಸ್ಸಾದ ಕರಾವಳಿಯಲ್ಲಿನ ಚಾಂದಿಪುರ್ ಸಮಗ್ರ ಪರೀಕ್ಷಾರ್ಥ ವಲಯದಿಂದ ಭಾರತೀಯ ರಕ್ಷಣಾ ಪಡೆಯು ಉಡಾಯಿಸಿತು.
PTI

ಸಮಗ್ರ ಪರೀಕ್ಷಾ ವಲಯದ ಮೂರನೇ ಕಾಂಪ್ಲೆಕ್ಸ್‌ನಲ್ಲಿನ ಸಂಚಾರಿ ವಾಹಕದಿಂದ ಬೆಳಿಗ್ಗೆ 11.35ಕ್ಕೆ ಕ್ಷಿಪಣಿ ನಭಕ್ಕೆ ನೆಗೆದ ನಂತರ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧಿಕಾರಿಯೊಬ್ಬರು, ರಕ್ಷಣಾ ಪಡೆಗಳು ನಡೆಸಿದ ಬಳಕೆಗಾಗಿನ ಪರೀಕ್ಷೆಯಿದು ಎಂದಷ್ಟೇ ತಿಳಿಸಿದ್ದಾರೆ.

300 ಕೇಜಿ ತೂಕದ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತು 290 ಕಿಲೋ ಮೀಟರ್ ದೂರದ ವ್ಯಾಪ್ತಿಯವರೆಗೆ ಶಬ್ದದ ವೇಗಕ್ಕಿಂತ 2.8 ಪಟ್ಟು ವೇಗದಲ್ಲಿ ನೆಗೆಯುವ ಸಾಮರ್ಥ್ಯ ಈ ಕ್ಷಿಪಣಿ ಹೊಂದಿದೆ.

ಜಲಾಂತರ್ಗಾಮಿಗಳು, ಹಡಗುಗಳು, ವಿಮಾನಗಳು ಮತ್ತು ನೆಲದಲ್ಲಿ ನಿರ್ಮಿಸಲಾದ ವಾಹಕಗಳಿಂದ ಉಡಾವಣೆ ನಡೆಸಬಹುದಾದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ರಷ್ಯಾ ಜತೆ ಜಂಟಿಯಾಗಿ ಭಾರತವು ಅಭಿವೃದ್ಧಿ ಪಡಿಸಿದೆ.

ಇದೇ ಹಿನ್ನೆಲೆಯಲ್ಲಿ ಭಾರತದ ಬ್ರಹ್ಮಪುತ್ರಾ ಮತ್ತು ರಷ್ಯಾದ ಮೋಸ್‌ಕ್ವಾ ನದಿಗಳ ಹೆಸರನ್ನು ಸಮ್ಮಿಳಿತಗೊಳಿಸಿ ಕ್ಷಿಪಣಿಗೆ ನಾಮಕರಣ ಮಾಡಲಾಗಿದೆ.

ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಶಸ್ತ್ರಾಸ್ತ್ರ ಪಡೆಗಳು ಮತ್ತು ರಕ್ಷಣಾ ವಿಜ್ಞಾನಿಗಳನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅಭಿನಂದಿಸಿದ್ದಾರೆ.

ಬ್ರಹ್ಮೋಸ್ ಬ್ಲಾಕ್-1 ಮಾದರಿಯ 67 ಕ್ಷಿಪಣಿಗಳು ಪ್ರಸಕ್ತ ಒಂದು ರೆಜಿಮೆಂಟ್, ಐದು ಸಂಚಾರಿ ಸ್ವಯಂಚಾಲಿತ ಉಡಾವಕಗಳು ಮತ್ತು ಎರಡು ಸಂಚಾರಿ ಕಮಾಂಡ್ ಠಾಣೆಗಳು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇಂದು ಪ್ರಯೋಗ ಮಾಡಲಾಗಿರುವುದು ಬ್ರಹ್ಮೋಸ್ ಬ್ಲಾಕ್-2 ಮಾದರಿ. ಇದನ್ನೂ ಸೇನೆಗೆ ಸೇರಿಸಿ ಎರಡು ದಳಗಳನ್ನು ಹುಟ್ಟು ಹಾಕಲು ರಕ್ಷಣಾ ಇಲಾಖೆಯು ಭರದ ಸಿದ್ಧತೆ ನಡೆಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ