ಕಳೆದೊಂದು ವಾರದಿಂದ ಉಸಿರು ಬಿಗಿ ಹಿಡಿದು ಕುಳಿತಿದ್ದ ಬಿಹಾರ ಪೊಲೀಸರ ಕುಟುಂಬಗಳು ಕೊನೆಗೂ ನಿಟ್ಟುಸಿರು ಬಿಟ್ಟಿವೆ. ಕೊಟ್ಟ ಮಾತಿನಂತೆ ನಕ್ಸಲೀಯರು ಮೂವರು ಪೊಲೀಸರನ್ನು ಬಿಡುಗಡೆ ಮಾಡಿದ್ದು, ಸೋಮವಾರ ಮುಂಜಾನೆ ತಮ್ಮ ಮನೆಗಳಿಗೆ ಮರಳಿದ್ದಾರೆ.
ಕಳೆದ ಭಾನುವಾರ ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಸಂದರ್ಭದಲ್ಲಿ ಎಂಟು ಪೊಲೀಸರನ್ನು ಕೊಂದು ನಾಲ್ವರನ್ನು ಅಪಹರಿಸಿದ್ದ ಮಾವೋವಾದಿಗಳು, ತಮ್ಮ ಬೇಡಿಕೆಗಳಿಗೆ ಸರಕಾರ ಮಣಿಯದೇ ಇದ್ದಾಗ ಓರ್ವನನ್ನು ಹತ್ಯೆ ಮಾಡಿದ್ದರು. ನಂತರ ಮೃದುವಾಗಿದ್ದ ಬಂಡುಕೋರರು ಉಳಿದ ಮೂವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಸಬ್ ಇನ್ಸ್‌ಪೆಕ್ಟರ್‌ಗಳಾದ ರೂಪೇಶ್ ಕುಮಾರ್, ಅಭಯ್ ಕುಮಾರ್ ಯಾದವ್ ಮತ್ತು ಬಿಎಂಪಿ ಹವಾಲ್ದಾರ್ ಎಹ್ಸಾನ್ ಖಾನ್ ಎಂಬ ಮೂವರು ಪೊಲೀಸರೇ ಇದೀಗ ಬಿಡುಗಡೆ ಭಾಗ್ಯ ಕಂಡವರು. ಅವರು ಇಂದು ಬೆಳಿಗ್ಗೆ 6.30ರ ಹೊತ್ತಿಗೆ ಟಾಟಾ ಸಫಾರಿ ವಾಹನದಲ್ಲಿ ಬಂದಿದ್ದು, ಲಖಿಸರಾಯ್ ಪೊಲೀಸ್ ಠಾಣೆಗೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ.
ಆರಂಭದಲ್ಲಿ ತಾವು ಭಾನುವಾರವೇ ಪೊಲೀಸರನ್ನು ಬಿಡುಗಡೆ ಮಾಡಿದ್ದೇವೆ ಎಂದು ನಕ್ಸಲರು ಹೇಳಿಕೊಂಡಿದ್ದರು. ಪೊಲೀಸರು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳಬೇಕೆನ್ನುವ ಹಿನ್ನೆಲೆಯಲ್ಲಿ ನಾವು ಉದ್ದೇಶಪೂರ್ವಕವಾಗಿ ಬಿಡುಗಡೆಯನ್ನು ವಿಳಂಬಿಸುತ್ತಿದ್ದೇವೆ ಎಂದು ನಂತರ ತಮ್ಮ ಹೇಳಿಕೆ ಬದಲಾಯಿಸಿದ್ದರು.
ಆಗಸ್ಟ್ 29ರಂದು ಕಜ್ರಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಎಂಟು ಪೊಲೀಸರನ್ನು ಕೊಂದಿದ್ದ ಮಾವೋಗಳು, ಬಿಹಾರ ಮಿಲಿಟರಿ ಪೊಲೀಸ್ ಹವಾಲ್ದಾರ್ ಲುಕಾಸ್ ತೇಟೆ ಸೇರಿದಂತೆ ನಾಲ್ವರನ್ನು ಅಪಹರಿಸಿದ್ದರು.
ತಮ್ಮ ಕಡೆಯ ಎಂಟು ಮಂದಿಯನ್ನು ಬಿಡುಗಡೆ ಮಾಡಬೇಕೆಂದು ಬೇಡಿಕೆ ಮುಂದಿಟ್ಟಿದ್ದ ನಕ್ಸಲರಿಗೆ ಬಿಹಾರ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವು ನಿರೀಕ್ಷಿತ ಪ್ರತಿಕ್ರಿಯೆ ನೀಡದೇ ಇದ್ದಾಗ ಲುಕಾಸ್ ತೇಟೆಯವರನ್ನು ಕೊಂದು ಹಾಕಲಾಗಿತ್ತು. ಇಷ್ಟರಲ್ಲೇ ಮಾತುಕತೆ ನಡೆಸುವ ಬದಲು ಸರಕಾರವು ಕೂಂಬಿಂಗ್ ಕಾರ್ಯಾಚರಣೆಗೆ ಹೆಚ್ಚಿನ ಒಲವು ವ್ಯಕ್ತಪಡಿಸಿತ್ತು.
ಕೊನೆಗೂ ಸರಕಾರ ಮಾತುಕತೆಗೆ ಮುಂದಾಗಿತ್ತಾದರೂ, ಇದನ್ನು ನಕ್ಸಲ್ ಪ್ರಮುಖರು ತಳ್ಳಿ ಹಾಕಿದ್ದರು. ಈ ನಡುವೆ ಕಿಶನ್‌ಜೀ ಓರ್ವ ಪೊಲೀಸ್ ಸಿಬ್ಬಂದಿಯ ಕುಟುಂಬದ ಜತೆ ಮಾತುಕತೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು. ನಂತರ ತಾವು ಬೇಷರತ್ ಆಗಿ ಪೊಲೀಸರನ್ನು ಬಿಡುಗಡೆ ಮಾಡುವುದಾಗಿ ಕೆಂಪು ಉಗ್ರರು ಪ್ರಕಟಿಸಿದ್ದರು.
ನಿನ್ನೆ ಇಡೀ ದಿನ ಬಿಡುಗಡೆಗೊಂಡ ಪೊಲೀಸರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ರಾತ್ರಿಯವರೆಗೂ ಪತ್ತೆಯಾಗದೇ ಇದ್ದಾಗ ತೀವ್ರ ಆತಂಕ ಪರಿಸ್ಥಿತಿಯೂ ನೆಲೆಸಿತ್ತು. ಕೊನೆಗೂ ಇಂದು ಮುಂಜಾನೆ ಪೊಲೀಸರು ಪತ್ತೆಯಾಗುವುದರೊಂದಿಗೆ ಒತ್ತೆ ಪ್ರಕರಣ ಬಹುತೇಕ ಸುಖಾಂತ್ಯ ಕಂಡಿದೆ.
ಪೊಲೀಸರ ಮನೆಯವರು ಕೂಡ ನಕ್ಸಲರು ಸುರಕ್ಷಿತವಾಗಿ ತಮ್ಮವರನ್ನು ಬಿಡುಗಡೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.