ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಯಿಯ ಶವದೊಂದಿಗೆ ತಿಂಗಳುಗಟ್ಟಲೆ ಕಳೆದ ಪುತ್ರಿ!
(Vinodini Gupta | Shalini Mehra | Ronesh Mehra | daughter lived with dead body)
ತಾಯಿ ಇಹಲೋಕ ತ್ಯಜಿಸಿ ತಿಂಗಳು ಕಳೆದರೂ ಅದನ್ನು ಅರ್ಥ ಮಾಡಿಕೊಳ್ಳದ ಮಾನಸಿಕ ಅಸ್ವಸ್ಥ ಪುತ್ರಿಯ ವ್ಯಥೆಯ ಕಥೆಯಿದು. ತಾಯಿಯ ಶವದೊಂದಿಗೆ ತಿಂಗಳಿಗೂ ಹೆಚ್ಚು ಕಾಲ ಬದುಕಿದ ನಂತರ ಮನೆಗೆ ಹೊರಗಿನವರು ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ನವದೆಹಲಿಯಲ್ಲಿನ ವಿನೋದಿನಿ ಗುಪ್ತಾ (80) ಎಂಬ ವೃದ್ಧೆ ಕೆಲ ತಿಂಗಳುಗಳ ಹಿಂದೆ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ ಇದು ಹೊರಜಗತ್ತಿಗೆ ತಿಳಿದು ಬಂದಿರಲಿಲ್ಲ.
ಆಕೆಯ ಪುತ್ರಿ ಶಾಲಿನಿ ಮೆಹ್ರಾ (45) ಮಾನಸಿಕ ಅಸ್ವಸ್ಥೆ. ದೆಹಲಿಯಲ್ಲಿನ ಸಾಕೇತ್ ಡಿ-ಬ್ಲಾಕಿನಲ್ಲಿರುವ ಮನೆಯಲ್ಲಿ ಇಬ್ಬರೇ ವಾಸಿಸುತ್ತಿದ್ದ ಇವರು ಇತರರ ಜತೆ ಸಂಪರ್ಕದಲ್ಲೂ ಇರಲಿಲ್ಲ.
ಕೆಲ ದಿನಗಳ ಹಿಂದಷ್ಟೇ ದೆಹಲಿ ಜಲ ಮಂಡಳಿಯ ಉದ್ಯೋಗಿ ರಾಜೇಂದ್ರ ಎಂಬವರು ನೀರಿನ ಮೀಟರ್ ಪರಿಶೀಲನೆಗೆಂದು ಶಾಲಿನಿ ಮನೆಗೆ ತೆರಳಿದ್ದಾಗ ಏನೋ ವಾಸನೆ ಬಂದು ಶಂಕೆ ಹುಟ್ಟಿಕೊಂಡಿತ್ತು. ಅದರಂತೆ ಅದೇ ಮನೆಯ ಮೊದಲನೇ ಮಹಡಿಯಲ್ಲಿ ವಾಸಿಸುತ್ತಿದ್ದ ಕೆ.ಎಲ್. ಭಾಟಿಯಾ ಎಂಬವರಿಗೆ ರಾಜೇಂದ್ರ ಮಾಹಿತಿ ನೀಡಿದ್ದರು.
ಭಾಟಿಯಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಮನೆಗೆ ತೆರಳಿ ಬಾಗಿಲು ಬಡಿದಾಗ ಯಾವುದೇ ಪ್ರತ್ಯುತ್ತರ ಬರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ನುಗ್ಗಿದ್ದರು. ಪರಿಶೀಲನೆ ನಡೆಸಿದಾಗ ಒಂದು ಕೊಠಡಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ಅಚ್ಚರಿಯೆಂದರೆ ಶವದ ಪಕ್ಕದಲ್ಲೇ ಮಹಿಳೆಯೊಬ್ಬಳು ಕುಳಿತಿದ್ದುದು.
ಪೊಲೀಸರ ಪ್ರಕಾರ ತಿಂಗಳಿಗೂ ಹೆಚ್ಚು ಕಾಲ ಶವದ ಜತೆಗಿದ್ದ ಮಹಿಳೆ ದೆಹಲಿ ಪೊಲೀಸ್ ಇಲಾಖೆಯ ಮೊದಲ ಇನ್ಸ್‌ಪೆಕ್ಟರ್ ಡಿ.ಡಬ್ಲ್ಯೂ. ಮೆಹ್ರಾ ಅವರ ಮೊಮ್ಮಗ ರೋನೇಶ್ ಮೆಹ್ರಾರ ವಿಚ್ಛೇದಿತ ಪತ್ನಿ ಶಾಲಿನಿ ಮೆಹ್ರಾ.
ಆದರೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲಿನಿ, ಪತ್ತೆಯಾಗಿರುವ ಶವ ತನ್ನ ತಾಯಿಯದ್ದು ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಇಲ್ಲೇ ನೆಲೆಸಿದ್ದ ಕಟ್ಟಡ ನಿರ್ಮಾಣಗಾರರ ಶವ ಇದಾಗಿದ್ದು, ಈ ಮನೆಯಲ್ಲಿ ಎಸೆದು ಹೋಗಿದ್ದಾರೆ. ನನ್ನ ತಾಯಿ ಕಳೆದ ವರ್ಷವೇ ಸತ್ತಿದ್ದಾರೆ ಮತ್ತು ಆ ಶವವನ್ನು ದಹನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿದಾಗ ಯಾವುದೇ ಉತ್ತರ ನೀಡಲು ಶಾಲಿನಿ ನಿರಾಕರಿಸಿದ್ದರು.
ಶಾಲಿನಿಯವರ ತಾಯಿಯ ಮಂಚದಲ್ಲಿ ಕೊಳೆತ ಶವ ಪತ್ತೆಯಾಗಿತ್ತು. ನಾವು ಈ ಕುರಿತು ಶಾಲಿನಿಯವರಲ್ಲಿ ಪ್ರಶ್ನಿಸಿದರೂ, ಯಾವುದೇ ಉತ್ತರ ನೀಡಿಲ್ಲ. ಅವರು ಮಾನಸಿಕ ಅಸ್ವಸ್ಥೆಯಾಗಿದ್ದು, ಯಾರ ಜತೆಗೂ ಮಾತನಾಡುತ್ತಿಲ್ಲ. ಕಳೆದ ಕೆಲವು ತಿಂಗಳಿಂದ ಅವರ ಮನೆಗೆ ಯಾರೊಬ್ಬರೂ ಭೇಟಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.