30 ವರ್ಷಗಳ ಹಿಂದೆ ಸ್ವತಃ ಅನಾಥೆಯಾಗಿದ್ದವಳೊಬ್ಬಳು ಇದೀಗ ಅಸ್ವಸ್ಥ ಅನಾಥ ಬಾಲಕಿಯೊಬ್ಬಳನ್ನು ದತ್ತು ಸ್ವೀಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾಳೆ.
PR
ಪುಣೆಯಲ್ಲಿನ ಶ್ರೀವತ್ಸಾ ಅನಾಥಾಲಯದಿಂದ ಮೂರು ದಶಕಗಳ ಹಿಂದೆ ಸ್ವೀಡನ್ ಕುಟುಂಬವೊಂದು ಅನಾಥ ಬಾಲಕಿ ಕವಿತಾಳನ್ನು ದತ್ತು ಪಡೆದುಕೊಂಡಿತ್ತು. ಆಕೆಯೀಗ ಕೆರೊಲಿನ್ ಆಗಿ ಬದಲಾಗಿದ್ದಾಳೆ.
ಸರಿಯಾಗಿ 30 ವರ್ಷಗಳ ನಂತರ ಪುಣೆಗೆ ಬಂದಿರುವ ಕವಿತಾ, ಅದೇ ಅನಾಥಾಶ್ರಮದಲ್ಲಿರುವ ತಲಸೇಮಿಯಾ ರೋಗಿಷ್ಠ ಬಾಲಕಿಯೊಬ್ಬಳನ್ನು ದತ್ತು ಪಡೆದುಕೊಂಡಿದ್ದಾಳೆ.
ಸ್ವೀಡನ್‌ನಲ್ಲಿ ನರ್ಸ್ ಆಗಿರುವ ಕೆರೊಲಿನ್ (ಕವಿತಾ) ಕಳೆದ ವರ್ಷ ಅನಾಥಾಶ್ರಮದಲ್ಲಿ ಸ್ವಯಂಸೇವಕಿಯಾಗಿ ಕಾರ್ಯನಿರ್ವಹಿಸಲು ಬಂದಿದ್ದಳು. ಈ ಸಂದರ್ಭದಲ್ಲಿ ಸುಮಾರು ಆರು ವಾರಗಳ ಕಾಲ ಇಲ್ಲಿ ತಂಗಿದ್ದ ಕೆರೊಲಿನ್, ಚಾಂದಿನಿ ಎಂಬ ಬಾಲಕಿಯತ್ತ ಹೆಚ್ಚು ಆಸ್ಥೆ ವಹಿಸಿದ್ದಳು.
ಇದು ಭಾವನಾತ್ಮಕ ಸಂಬಂಧವಾಗಿ ಮಾರ್ಪಟ್ಟಿತ್ತು. ಸ್ವೀಡನ್‌ಗೆ ವಾಪಸ್ ಹೋಗಿದ್ದರೂ, ಚಾಂದಿನಿ ಆಗಾಗ ಕಾಡುತ್ತಿದ್ದ ಕಾರಣ ಭಾರತಕ್ಕೆ ಮರಳಿರುವ ಕೆರೊಲಿನ್ ದತ್ತು ಪಡೆದುಕೊಂಡು ಸಂಭ್ರಮಿಸಿದ್ದಾಳೆ.
ಚಾಂದಿನಿಯನ್ನು ಎತ್ತಿಕೊಂಡು ಸ್ವೀಡನ್‌ಗೆ ತೆರಳಿರುವ ಕೆರೊಲಿನ್, ಆಕೆಗೆ ಪೂರಕ ಚಿಕಿತ್ಸೆ ಮತ್ತು ವಿದ್ಯಾಭ್ಯಾಸವನ್ನು ಒದಗಿಸುವ ಭರವಸೆ ನೀಡಿದ್ದಾಳೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ.