ಜಾರ್ಖಂಡ್‌ನಲ್ಲಿನ ರಾಜಕೀಯ ಬಿಕ್ಕಟ್ಟು ಪರಿಹಾರವಾಗುವ ಮತ್ತೊಂದು ಸುತ್ತಿನ ಯತ್ನಗಳು ನಡೆಯುತ್ತಿದೆ. ಪ್ರಸಕ್ತ ರಾಷ್ಟ್ರಪತಿ ಆಳ್ವಿಕೆಯಿರುವ ರಾಜ್ಯದಲ್ಲಿ ಈ ಹಿಂದಿನ ಮೈತ್ರಿ ಪಕ್ಷ ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಛಾ (ಜೆಎಂಎಂ) ಜತೆ ಸೇರಿ ಸರಕಾರ ರಚಿಸುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.
ನಮ್ಮ ಪಕ್ಷವು ನೂತನ ಸರಕಾರವನ್ನು ರಚಿಸಲು ನಿರ್ಧರಿಸಿದೆ. ನಾವು ಸರಕಾರ ರಚಿಸುತ್ತೇವೆ ಎಂಬ ಪ್ರಸ್ತಾಪ ಸಲ್ಲಿಸಲು ರಾಜ್ಯಪಾಲರನ್ನು ಶೀಘ್ರವೇ ಭೇಟಿಯಾಗಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರನ್ನು ಆರಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಜೆಎಂಎಂ ವರಿಷ್ಠ ಶಿಬು ಸೊರೆನ್ ಅವರು ಸರಕಾರದ ಪರ ಮತ ಚಲಾಯಿಸಿದ ನಂತರ ಜಾರ್ಖಂಡ್‌ನಲ್ಲಿನ ಜೆಎಂಎಂ ಮತ್ತು ಬಿಜೆಪಿ ಮೈತ್ರಿ ಸರಕಾರ ಉರುಳಿ ಬಿದ್ದಿತ್ತು.
ಬಿಜೆಪಿ ಸರಕಾರ ರಚಿಸುವುದು ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಜಯ್ ಸೇಠ್, ಶಾಸಕಾಂಗ ಪಕ್ಷದ ನಾಯಕ ರಘುವರ್ ದಾಸ್ ಅವರು ರಾಜೀನಾಮೆ ನೀಡಿದ್ದು, ಬಿಜೆಪಿ ನೇತೃತ್ವದ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ನೇತೃತ್ವ ವಹಿಸುವ ಕುರಿತು ಸಂಕೇತಗಳನ್ನು ರವಾನಿಸಿದ್ದಾರೆ.
ಬಿಜೆಪಿ ಸರಕಾರ ರಚಿಸುವ ನಿಟ್ಟಿನಲ್ಲಿ ಜೆಎಂಎಂ ನಿಬಂಧನೆರಹಿತ ಬೆಂಬಲವನ್ನು ನೀಡುತ್ತಿದೆ ಎಂದು ಜೆಎಂಎಂ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ತಿಳಿಸಿದ್ದಾರೆ.
ಸಮಾನ ಮನಸ್ಕ ಪಕ್ಷಗಳಿಗೆ ಬೆಂಬಲ ನೀಡಲು ತಾವು ಸಿದ್ಧ ಎಂದು ಶಿಬು ಸೊರನ್ ಪುತ್ರ ಹಾಗೂ ಪಕ್ಷದ ನಾಯಕ ಹೇಮಂತ್ ಸೊರೆನ್ ಹೇಳಿದ ನಂತರ ಭಟ್ಟಾಚಾರ್ಯ ಅವರಿಂದ ಮಹತ್ವದ ಹೇಳಿಕೆ ಹೊರ ಬಿದ್ದಿದೆ.
ಜೆಎಂಎಂ ಬೆಂಬಲ ನೀಡಲು ಮುಂದೆ ಬರುತ್ತಿದ್ದಂತೆ ಬಿಜೆಪಿಯ ಹಲವು ಶಾಸಕರು ಕೇಸರಿ ಪಕ್ಷದ ಪ್ರಧಾನ ಕಚೇರಿಗೆ ದೌಡಾಯಿಸಿದ್ದಾರೆ. ಮುಂಡಾ ಅವರೇ ಸಿಎಂ ಗದ್ದುಗೆ ಪಡೆಯುವ ಸಾಧ್ಯತೆಗಳು ನಿಚ್ಛಳವಾಗಿವೆ.