ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಂಬಂಧ ಕಲ್ಪಿಸಬೇಡಿ. ನೀವು ಬೆಂಕಿಯ ಜತೆ ಆಟವಾಡಲು ಹೊರಟಿದ್ದೀರಿ, ಸುಟ್ಟು ಹೋದೀರಿ ಜೋಕೆ -- ಹೀಗೆಂದು ಕಾಂಗ್ರೆಸ್‌ಗೆ ಬಿಜೆಪಿ ಕಠಿಣ ಎಚ್ಚರಿಕೆ ನೀಡಿದೆ.
ಈ ಪ್ರಕರಣದಲ್ಲಿ ನೀವು (ಕಾಂಗ್ರೆಸ್) ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಬಂಧಿಸಿದ್ದೀರಿ. ಆದರೆ ಮೋದಿಯವರನ್ನು ಮುಟ್ಟುವ ಸಾಹಸಕ್ಕೆ ಕೈ ಹಾಕಬೇಡಿ. ನೀವು ಆಡುತ್ತಿರುವುದು ಬೆಂಕಿಯ ಜತೆಗೆ. ಅದು ನಿಮ್ಮನ್ನೇ ಸುಡಲಿದೆ ಎಂದು ಮುಂಬೈಯಲ್ಲಿ ಮಾತನಾಡುತ್ತಿದ್ದ ಕೇಸರಿ ಪಕ್ಷದ ಹಿರಿಯ ನಾಯಕ ವೆಂಕಯ್ಯ ನಾಯ್ಡು ಎಚ್ಚರಿಸಿದರು.
ಮುಂಬೈ ಬಿಜೆಪಿ ಅಧ್ಯಕ್ಷರನ್ನಾಗಿ ರಾಜ್ ಪುರೋಹಿತ್ ಅವರನ್ನು ಅಧಿಕೃತವಾಗಿ ಆರಿಸಿದ ನಂತರ ಮಾತನಾಡಿದ ಅವರು, ಸೊಹ್ರಾಬುದ್ದೀನ್ ಪ್ರಕರಣಕ್ಕೆ ಭಾರೀ ಮಹತ್ವ ನೀಡುತ್ತಿರುವುದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಸೊಹ್ರಾಬುದ್ದೀನ್ ಶೇಖ್ ಪ್ರಕರಣವು ಯಾಕೆ ಇಷ್ಟೊಂದು ಮಹತ್ವವಾಗಿದೆ? ಆತ ಯಾರು? ಆತನೊಬ್ಬ ಸ್ಮಗ್ಲರ್, ಮಾದಕ ವಸ್ತುಗಳ ಕಳ್ಳ ವ್ಯಾಪಾರಿ. ಆತನ ಬಗ್ಗೆ ಇಷ್ಟೊಂದು ಪ್ರಾಮುಖ್ಯತೆಯನ್ನು ಯಾಕೆ ನೀಡಲಾಗುತ್ತಿದೆ ಎಂದು ನಾಯ್ಡು ಕಾಂಗ್ರೆಸ್‌ಗೆ ಪ್ರಶ್ನೆ ಎಸೆದರು.
ಅಲ್ಲದೆ ಸಿಬಿಐ ತನಿಖಾ ಸಂಸ್ಥೆಯು ಗುಜರಾತ್ ಪ್ರಕರಣಗಳಿಗೆ ಮಾತ್ರ ಮೀಸಲಾಗಿರುವುದನ್ನೂ ಅವರು ತರಾಟೆಗೆ ತೆಗೆದುಕೊಂಡರು.
ಈ ಪ್ರಕರಣದಲ್ಲಿ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ರಾಜಸ್ತಾನಗಳಿಗೂ ಸಂಬಂಧವಿದೆ ಎಂದು ಕೇಂದ್ರ ಸರಕಾರವು ಸಿಬಿಐ ತನಿಖೆಗೆ ಸೂಚಿಸಿತ್ತು. ಆದರೆ ತನಿಖಾ ದಳವು ಕೇವಲ ಗುಜರಾತ್ ಪಾತ್ರದ ಬಗ್ಗೆ ಮಾತ್ರ ತನ್ನ ತನಿಖೆಯನ್ನು ಕೇಂದ್ರೀಕರಿಸುತ್ತಿದೆ ಎಂದರು.
ಯಾಕೆ ಗುಜರಾತನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಇತರ ರಾಜ್ಯಗಳ ಪಾತ್ರಗಳ ಕುರಿತು ಯಾಕೆ ತನಿಖೆ ನಡೆಸಲಾಗುತ್ತಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಿರುವ ಬಿಜೆಪಿ ಮಾಜಿ ಅಧ್ಯಕ್ಷ, ಮೋದಿ ಸರಕಾರದ ಸಾಧನೆಗಳನ್ನು ಪ್ರಶಂಸಿಸಿದ್ದಾರೆ.
ಕಳೆದ ಎಂಟು ತಿಂಗಳುಗಳ ಅವಧಿಯಲ್ಲಿ ಕರ್ಫ್ಯೂನಂತಹ ಸ್ಥಿತಿಯನ್ನು ಎದುರಿಸದ ಏಕೈಕ ರಾಜ್ಯವೆಂದರೆ ಗುಜರಾತ್. ಅಲ್ಲದೆ ದೇಶದಲ್ಲೇ ಅತೀ ಹೆಚ್ಚು ಸಂಪಾದಿಸುವ ಸರಾಸರಿ ಮುಸ್ಲಿಮರಿರುವುದು ಗುಜರಾತಿನಲ್ಲಿ. ಗಮನಾರ್ಹ ಜಿಡಿಪಿ ಮತ್ತು ಕನಿಷ್ಠ ಅಪರಾಧ ಪ್ರಕರಣಗಳು ನಡೆಯುತ್ತಿರುವುದು ಕೂಡ ಅದೇ ರಾಜ್ಯದಲ್ಲಿ ಎಂದು ಬಿಜೆಪಿ ಸರಕಾರವನ್ನು ಶ್ಲಾಘಿಸಿದರು.