ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈದ್ಯರ ಮುಷ್ಕರಕ್ಕೆ 50 ಅಮಾಯಕರು ಬಲಿಯಾಗಿದ್ದಾರೆ..
(Doctors strike | Rajasthan | medical services | nursing staff)
ರಾಜಸ್ತಾನದ ಪ್ರಮುಖ ಐದು ಜಿಲ್ಲೆಗಳಲ್ಲಿನ ವೈದ್ಯರುಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕದೆ 50ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.
ಜೋಧಪುರದಲ್ಲಿ ವೈದ್ಯರ ಮೇಲೆ ಪೊಲೀಸರು ಲಾಠೀಚಾರ್ಜ್ ನಡೆಸಿದ್ದನ್ನು ಪ್ರತಿಭಟಿಸಿ 1,200ಕ್ಕೂ ಹೆಚ್ಚು ಸರಕಾರಿ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದರು. ಇದೀಗ ಸರಕಾರದ ಜತೆಗಿನ ಮಾತುಕತೆಯ ನಂತರ ಬುಧವಾರ ಸಂಜೆ ತಮ್ಮ ಮುಷ್ಕರವನ್ನು ವೈದ್ಯರು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ರಾಜ್ಯದ ಆರು ವೈದ್ಯಕೀಯ ಕಾಲೇಜುಗಳು ಮತ್ತು ಅದರ ಆಸ್ಪತ್ರೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯರ ಮುಷ್ಕರ ಅತಿ ಹೆಚ್ಚು ಬಾಧಿಸಿರುವುದು ಜೋಧಪುರ ಮತ್ತು ಜೈಪುರಗಳಲ್ಲಿ. ಪುಟ್ಟ ಕಂದಮ್ಮಗಳು ಸೇರಿದಂತೆ ಇದುವರೆಗೆ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಶನಿವಾರ ಪ್ರತಿಭಟನೆ ಆರಂಭವಾದ ನಂತರ ಬಹುತೇಕ ಸರಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳು (ಒಪಿಡಿ) ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ. ಒಳ ರೋಗಿಗಳ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಅವರಿಗೆ ವೈದ್ಯರು ಚಿಕಿತ್ಸೆ ನೀಡುವ ಬದಲು ಶುಶ್ರೂಶಕಿಯರೇ ಉಪಚಾರ ಮಾಡುತ್ತಿದ್ದಾರೆ.
ಎಂಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ರೆಸಿಡೆಂಟ್ ವೈದ್ಯರು ಶನಿವಾರ ಮುಷ್ಕರಕ್ಕೆ ಕರೆ ನೀಡಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಖಾಸಗಿ ಮತ್ತು ಸರಕಾರಿ ವೈದ್ಯರು ಜೋಧಪುರದಲ್ಲಿನ 40 ಆಸ್ಪತ್ರೆಗಳಲ್ಲಿ ಪ್ರತಿಭಟನೆ ಆರಂಭಿಸಿದ್ದರೆ, ಜೈಪುರ, ಕೋಟಾ, ಅಜ್ಮೀರ್ ಮತ್ತು ಬಿಕನೇರ್‌ಗಳಲ್ಲಿ ರೆಸಿಡೆಂಟ್ ವೈದ್ಯರು ಕೆಲಸ ಸ್ಥಗಿತಗೊಳಿಸಿದ್ದರು.
ನಮ್ಮ ವಿದ್ಯಾರ್ಥಿಗಳು ಮತ್ತು ವೈದ್ಯರ ಮೇಲೆ ಲಾಠಿಚಾರ್ಜ್ ನಡೆಸಲಾಗಿದ್ದು, ಅವರು ಗಾಯಗೊಂಡಿದ್ದಾರೆ. ಇದನ್ನು ಪ್ರತಿಭಟಿಸಿ ನಾವು ಮುಷ್ಕರಕ್ಕೆ ಕರೆ ನೀಡಿದ್ದೇವೆ. ಇದು ಸಂಬಂಧಪಟ್ಟ ಪೊಲೀಸರನ್ನು ಅಮಾನತುಗೊಳಿಸುವವರೆಗೆ ಮುಂದುವರಿಯುತ್ತದೆ ಎಂದು ಜೈಪುರ ರೆಸಿಡೆಂಟ್ ವೈದ್ಯರುಗಳ ಸಂಘಟನೆ ಅಧ್ಯಕ್ಷ ಡಾ. ಕೆ.ಕೆ. ಸಾಹು ತಿಳಿಸಿದ್ದರು.
ವೈದ್ಯರುಗಳು ನೀಡುತ್ತಿರುವ ಕಾರಣಗಳನ್ನು ಒಪ್ಪಿಕೊಂಡರೂ, ಅವರ ಪ್ರತಿಭಟನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವೈದ್ಯರ ವರ್ತನೆಗೆ ರೋಗಿಗಳ ಕುಟುಂಬಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಅವರು ನನ್ನ ಪತ್ನಿಯನ್ನು ಕೊಂದರು. ನನ್ನ ಮಕ್ಕಳನ್ನು ಇನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಪೂರಕ ಚಿಕಿತ್ಸೆ ದೊರಕತೆ ಪತ್ನಿಯನ್ನು ಕಳೆದುಕೊಂಡ ಓರ್ವ ಪ್ರತಿಕ್ರಿಯಿಸಿದ್ದಾರೆ.