ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಮತ್ತೊಂದು ಕನಸಿಗೆ ಸುಪ್ರೀಂ ಕೋರ್ಟ್ ತಕರಾರು ತೆಗೆದಿದೆ. ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಹಾಗೂ ದಲಿತ ನಾಯಕ ಕಾನ್ಶೀರಾಮ್ ಅವರಿಗೆ ಅರ್ಪಿಸಲೆಂದು ನಿರ್ಮಾಣವಾಗಲಿರುವ ಪರಿಸರ ವಿಜ್ಞಾನ ಪಾರ್ಕಿನ ಕಾಮಗಾರಿಗಳ ಪ್ರಮಾಣವನ್ನು ಸುಪ್ರೀಂ ಪ್ರಶ್ನಿಸಿದೆ.
ಪಾರ್ಕಿನಲ್ಲಿ ಯಾವುದೇ ಸ್ಮಾರಕಗಳನ್ನು ನಿರ್ಮಿಸಬಾರದು ಎಂಬ ನಿಬಂಧನೆಯೊಂದಿಗೆ 2009ರ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಯೋಜನೆಗೆ ಅವಕಾಶ ನೀಡಿತ್ತು.
ಆದರೆ 200 ಕೋಟಿಗಳನ್ನು ಮೀಸಲಾಗಿಡಲಾಗಿದ್ದ ಈ ಯೋಜನೆಗೆ ಸರಕಾರವು ಮತ್ತೆ 400 ಕೋಟಿ ರೂಪಾಯಿಗಳನ್ನು ಸೇರಿಸಿ 600 ರೂಪಾಯಿಗಳಿಗೆ ಏರಿಸುವ ಮೂಲಕ ನಿರ್ಮಾಣ ಚಟುವಟಿಕೆಗಳನ್ನು ಬೃಹದಾಕಾರವನ್ನಾಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.
ಈ ಸಂಬಂಧ ಸುಪ್ರೀಂ ಕೋರ್ಟ್ ಮಾಯಾವತಿ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದ್ದು, ಹಲವು ಪ್ರಶ್ನೆಗಳನ್ನು ಕೇಳಿದೆ.
ನೀವು ಪಾರ್ಕ್ ನಿರ್ಮಾಣವಾಗುವ ಸ್ಥಳದಲ್ಲಿ ತಂದು ಎಸೆಯಲಾಗಿರುವ ಸಲಕರಣೆಗಳನ್ನು ನೋಡಿದರೆ, ಬೃಹತ್ ನಿರ್ಮಾಣಕ್ಕೆ ಕೈ ಹಾಕಿರುವುದು ಎದ್ದು ಕಾಣುತ್ತಿದೆ. ನ್ಯಾಯಾಲಯವು ನೀಡಿರುವ ಆದೇಶವನ್ನು ನೀವು ಉಲ್ಲಂಘಿಸಿದ್ದೀರಾ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ಅಷ್ಟೊಂದು ಪ್ರಮಾಣದ ಉಕ್ಕು ಮತ್ತು ಸಿಮೆಂಟನ್ನು ಯಾಕೆ ವ್ಯರ್ಥ ಮಾಡಲಾಗುತ್ತಿದೆ ಎಂದು ಸುಪ್ರೀಂ ಪ್ರಶ್ನಿಸಿದೆ.
ಆದರೆ ಇದಕ್ಕೆ ಉತ್ತರಿಸಿರುವ ಉತ್ತರ ಪ್ರದೇಶ ಸರಕಾರ, ತಾನು ಕೇವಲ ಕಂಪೌಂಡ್ ಗೋಡೆ, ಶೌಚಾಲಯಗಳು ಮತ್ತು ಕಾರಂಜಿಗಳನ್ನು ಮಾತ್ರ ನಿರ್ಮಿಸುತ್ತಿರುವುದಾಗಿ ಹೇಳಿದೆ.
ಇದನ್ನು ರುಜುವಾತುಪಡಿಸಲು ಸರಕಾರಕ್ಕೆ ನ್ಯಾಯಾಲಯವು ಎರಡು ವಾರಗಳ ಕಾಲಾವಕಾಶ ನೀಡಿದೆ.
2009ರವರೆಗೆ ಇಲ್ಲಿ 195 ಎಕರೆ ಪ್ರದೇಶವನ್ನು ಪಾರ್ಕಿಗಾಗಿ ಮೀಸಲಿಡಲಾಗಿತ್ತು. ಆಗ ಲಕ್ನೋದ ಹಳೆ ಜೈಲು ಕೂಡ ಇಲ್ಲೇ ಇತ್ತು. ಆದರೆ ಪಾರ್ಕ್ ನಿರ್ಮಾಣಕ್ಕಾಗಿ ಮಾಯಾವತಿಯವರು ಜೈಲನ್ನು ಸ್ಥಳಾಂತರಿಸಿದರು ಎಂದು ಸುಪ್ರೀಂ ಮೆಟ್ಟಿಲೇರಿರುವ ಸಂಗಮ್ ಲಾಲ್ ಪಾಂಡೆ ಆರೋಪಿಸಿದ್ದಾರೆ.
ಇದರ ಪಕ್ಕದಲ್ಲೇ ಇರುವ ಅರ್ಧ ನಿರ್ಮಾಣವಾಗಿ ಸ್ಥಗಿತಗೊಂಡಿರುವ ಕಾನ್ಶೀರಾಮ್ ಸ್ಮಾರಕವಿರುವ ಪ್ರದೇಶವನ್ನೂ ಪಾರ್ಕ್‌ಗೆ ಸೇರ್ಪಡೆಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಕೋರ್ಟ್ ತಡೆಯಾಜ್ಞೆ ವಿಧಿಸಿತ್ತು.