ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಬೆಂಗಳೂರು ಯುವತಿಯರ ರಕ್ಷಣೆ
ನವದೆಹಲಿ, ಬುಧವಾರ, 8 ಸೆಪ್ಟೆಂಬರ್ 2010( 12:37 IST )
ರಾಷ್ಟ್ರ ರಾಜಧಾನಿಯಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿದ್ದ ಬೆಂಗಳೂರಿನ ಇಬ್ಬರು ಯುವತಿಯರನ್ನು ಹರಸಾಹಸಪಟ್ಟು ಪೊಲೀಸರು ರಕ್ಷಿಸಿದ್ದಾರೆ. ಇಲ್ಲಿಗೆ ಭೇಟಿ ನೀಡಿದ್ದ ಗ್ರಾಹಕನೊಬ್ಬ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ಸೆಂಟ್ರಲ್ ದೆಹಲಿಯಲ್ಲಿನ ವೇಶ್ಯಾಗೃಹವೊಂದರಲ್ಲಿ 20ರ ಆಸುಪಾಸಿನ ಇಬ್ಬರು ಬೆಂಗಳೂರು ಯುವತಿಯರು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದಾರೆ ಎಂದು ಅಲ್ಲಿಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಯುವತಿಯರನ್ನು ಮೋಸದಿಂದ ತೊಗಲು ವ್ಯಾಪಾರಕ್ಕೆ ತಳ್ಳಲಾಗಿತ್ತು.
ಬೆಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಬಾಬು ಲಾಲ್ ಎಂಬಾತನನ್ನು ಭೇಟಿ ಮಾಡಿದ್ದಳು. ನವದೆಹಲಿಯ ಜನಪ್ರಿಯ ಕಾಲ್ ಸೆಂಟರಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಲಾಲ್, ಆಕೆಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದ. ಬಳಿಕ ಆತ ವೇಶ್ಯಾಗೃಹವೊಂದಕ್ಕೆ ಆಕೆಯನ್ನು ಮಾರಾಟ ಮಾಡಿ ವಾಪಸ್ಸಾಗಿದ್ದ.
ಮತ್ತೊಬ್ಬಾಕೆ ಎರಡು ಮಕ್ಕಳ ತಾಯಿ. 25ರ ಹರೆಯದ ಆಕೆಗೂ ನೌಕರಿಯ ಆಮಿಷವೊಡ್ಡಿ ನಂತರ ಮಾರಾಟ ಮಾಡಲಾಗಿತ್ತು. ಉದ್ಯೋಗದ ಕುರಿತು ಈ ಮಹಿಳೆ ತನ್ನ ಗಂಡ ಮತ್ತು ಕುಟುಂಬದ ಸದಸ್ಯರಿಗೂ ಮಾಹಿತಿ ನೀಡಿರಲಿಲ್ಲ.
ಇಬ್ಬರೂ ಬೆಂಗಳೂರಿನಿಂದ ಬಂದವರಾಗಿದ್ದರಿಂದ ವೇಶ್ಯಾಗೃಹದಲ್ಲಿ ಅವರು ಸ್ನೇಹಿತೆಯರಾಗಿದ್ದರು. ಆಗ ಅಲ್ಲಿಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ತಮ್ಮ ಕಥೆಯನ್ನು ಯುವತಿಯರು ಹೇಳಿದ್ದರು.
ಲಾಲ್ ನಮಗೆ ಉದ್ಯೋಗದ ಭರವಸೆ ನೀಡಿದ್ದ. ಆದರೆ ನಂತರ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ ಎಂದು ಇಬ್ಬರೂ ಯುವತಿಯರು ಪೊಲೀಸರಿಗೆ ತಿಳಿಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.
ಅತ್ತ ವೇಶ್ಯಾಗೃಹದ ಮಾಲಕಿ ಶಾರದಾಳನ್ನು ಬಂಧಿಸಲಾಗಿದೆ. ಆಕೆಯ ಮೇಲೆ ಅಪಹರಣ, ಅತ್ಯಾಚಾರ, ಅಕ್ರಮ ಬಂಧನ ಮತ್ತು ಅಕ್ರಮ ಮಾನವ ಕಳ್ಳ ಸಾಗಾಟ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಲಿಪಶು ಯುವತಿಯರಿಬ್ಬರನ್ನೂ ಇಲ್ಲಿನ ನಾರಿ ನಿಕೇತನ್‌ಗೆ ಸೇರಿಸಲಾಗಿದೆ.