ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಸರಿ ಭಯೋತ್ಪಾದನೆ; ಗುಜರಾತ್ ವಿಧಾನಸಭೆಯಲ್ಲೂ ಗದ್ದಲ (saffron terror | Gujarat Assembly | P Chidambaram | BJP)
Bookmark and Share Feedback Print
 
ಕೇಂದ್ರ ಗೃಹಸಚಿವ ಪಿ. ಚಿದಂಬರಂ 'ಕೇಸರಿ ಭಯೋತ್ಪಾದನೆ' ಎಂಬ ಉಕ್ತಿಯನ್ನು ಬಳಸುವ ಮೂಲಕ ವಿವಾದಕ್ಕೆ ತುತ್ತಾಗಿರುವುದು ಗುಜರಾತ್ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಗಿದೆ. ಈ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪರಸ್ಪರ ದೋಷಾರೋಪಣೆಗಳನ್ನು ಮಾಡಿದ್ದಾರೆ.

ಸಚಿವರ ವಿವಾದಿತ ಹೇಳಿಕೆಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಕೇಸರಿ ಬಣ್ಣದ ಜತೆ ಸಮ್ಮಿಳಿತಗೊಳಿಸಿರುವ ಚಿದಂಬರಂ ವಿರುದ್ಧ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಜಿಹಾದಿ ಭಯೋತ್ಪಾದನೆಯ ಕುರಿತು ಗಮನ ಕೇಂದ್ರೀಕರಿಸುವ ಬದಲು ಗೃಹಸಚಿವರು ಸಮಾಜದ ಒಂದು ಸಮುದಾಯದ ಪ್ರೀತಿಯನ್ನು ಗಳಿಸುವ ಸಲುವಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಇದು ಕೋಟ್ಯಂತರ ಭಾರತೀಯರಿಗೆ ಎಸಗಿರುವ ಅಪಮಾನ ಎಂದು ಬಿಜೆಪಿಯ ದಿಲೀಪ್ ಸಿನ್ಹ ಪಾರ್ಮರ್ ಆರೋಪಿಸಿದರು.

ಚಿದಂಬರಂ ಅವರು ಕೇವಲ ಸಮಾಜಕ್ಕಷ್ಟೇ ಅಪಮಾನ ಎಸಗಿರುವುದಲ್ಲ, ನಮ್ಮ ಸಂತರಿಗೂ ಅಗೌರವ ತೋರಿಸಿದ್ದಾರೆ. ಕೇಸರಿ ಬಣ್ಣವೆಂಬುದು ಶಾಂತಿ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿದೆ ಎಂದು ವಿವರಣೆ ನೀಡಿದರು.

ತಾಯ್ನಾಡಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಸಾಧು-ಸಂತರು ಮತ್ತು ರಜಪೂತರ ಜತೆ ಗುರುತಿಸಿಕೊಳ್ಳುವ ಬಣ್ಣ ಖಾವಿ. ಭಯೋತ್ಪಾದನೆಗೆ ಯಾವುದೇ ಬಣ್ಣವಿಲ್ಲ. ಹಾಗಾಗಿ ಸಚಿವರು ನೀಡಿರುವ ಹೇಳಿಕೆ ಖಂಡನೀಯ ಎನ್ನುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಹರಿಹಾಯ್ದರು.

ಪ್ರತಿಪಕ್ಷದ (ಕಾಂಗ್ರೆಸ್) ನಾಯಕ ಶಕ್ತಿ ಸಿನ್ಹ ಗೋಹಿಲ್ ತೀವ್ರ ವಿರೋಧ ವ್ಯಕ್ತಪಡಿಸುತ್ತಾ, ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಬದಲು ಬಿಜೆಪಿಯು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದರು.

ಚರ್ಚೆಯ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗಿದರು. ಆಗ ಸ್ಪೀಕರ್ ದೌಲತ್ ದೇಸಾಯಿಯವರು ಶಾಸಕರ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಕಲಾಪ ಮುಂದುವರಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ